Latest

ಕಾದಂಬರೀ ಕ್ಷೇತ್ರದ ಸಿಡಿಲಮೊಗ್ಗು ತರಾಸು ಸ್ಮರಣೆ; ಇಂದು ತರಾಸು ಜನ್ಮದಿನ

ಎಲ್.ಎಸ್.ಶಾಸ್ತ್ರಿ

ತಳಕಿನ ರಾಮಸ್ವಾಮಿಯವರ ಮಗ ಸುಬ್ಬರಾಯರನ್ನು ನೆನಪು ಮಾಡಿಕೊಳ್ಳುವದೆಂದರೆ ಇಡೀ ಕನ್ನಡ ಕಾದಂಬರೀ ಕ್ಷೇತ್ರವನ್ನೇ ನೆನಪು ಮಾಡಿಕೊಂಡ ಹಾಗೆ. ಅವರ ಬಗ್ಗೆ ಒಬ್ಬರು ಬರೆಯುತ್ತಾರೆ-
” ತರಾಸು ಬರೆದು ಬದುಕಿದರು, ಬರೆದಂತೆ ಬದುಕಿದರು”
ಎರಡೂ ಅಷ್ಟೇ ನಿಜ. ಕನ್ನಡದಲ್ಲಿ ಬರೆದೇ ಬದುಕಿದವರು ಬಹಳ ಕಡಿಮೆ. ಅನಕೃ, ಕಾರಂತರಂತಹ ಒಬ್ಬಿಬ್ಬರು ಸಿಗಬಹುದು. ಬರೆದು ಬದುಕುವ ಕಾಲವೂ ಆಗಿರಲಿಲ್ಲ ಅದು.
ಕನ್ನಡದಲ್ಲಿ ಕಾದಂಬರಿಗಳ ರಚನೆ 1920 ರ ದಶಕದ ಕಾಲದಲ್ಲಿ ಆರಂಭವಾಯಿತಾದರೂ ಅದು ರಭಸ ಪಡೆದುಕೊಂಡಿದ್ದು 40 ರ ದಶಕದಲ್ಲೇ. ಅಲ್ಲಿಂದ ಎಂಬತ್ತರ ದಶಕದವರೆಗೂ ಒಂದು ಕಾದಂಬರೀ ಯುಗವನ್ನೇ ನಾವು ಕಂಡೆವು. ಅದೇ ಆಗ ಹೊಸ ಬರೆಹಗಾರರಾಗಿ‌ ರೂಪುಗೊಳ್ಳುತ್ತಿದ್ದ ಒಂದು ಯುವಪೀಳಿಗೆಗೆ ಬೆಳೆಯಲು ಆಹಾರ ಒದಗಿಸಿದವರೇ ಈ ಕಾದಂಬರಿಕಾರರು. ನಮಗೆಲ್ಲ ಬಾಲ್ಯದಲ್ಲಿ ಪುಸ್ತಕ ಓದುವ ಅಭಿರುಚಿ ಹುಟ್ಟಿಸಿದರು. ಮೊದಲು ಕಾದಂಬರಿಗಳಿಂದ ನಮ್ಮ ಓದನ್ನು ಆರಂಭಿಸಿದ ನಾವು ನಂತರ ಕಾವ್ಯ, ಕತೆ, ವಿಮರ್ಶೆ, ವೈಚಾರಿಕ ಕೃತಿಗಳತ್ತ ಹೊರಳಿದೆವು. ಆ ಸಂದರ್ಭದಲ್ಲಿ ನಮ್ಮ ನಾಡಿನ ಮನೆ ಮನೆಗಳಲ್ಲೆಲ್ಲ‌ ಕಾದಂಬರಿ ಓದುಗರು ತುಂಬಿದ್ದರು.
ಈ ಅಭಿರುಚಿ ಹುಟ್ಟಿಸಿದ ಬಹುದೊಡ್ಡ ಕಾದಂಬರಿಕಾರರ ಪಡೆಯೇ ಅಂದು‌ ನಿರ್ಮಾಣವಾಗಿತ್ತು. ನಾವೆಲ್ಲ ಅಂದಿನ ಪ್ರಗತಿಶೀಲ ಪಂಥದ ಅಧ್ವರ್ಯು ಅನಕೃ ಮತ್ತು ಅವರಿಂದಲೇ ಪ್ರೇರಣೆ ಪಡೆದ ತರಾಸು, ಕೃಷ್ಣಮೂರ್ತಿ ಪುರಾಣಿಕ, ಬೀಚಿ ಮೊದಲಾದವರ ಕಾದಂಬರಿಗಳನ್ನು ಬಿಟ್ಟೂಬಿಡದೇ ಓದುತ್ತಿದ್ದೆವು. ( ಎಚ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳ ಓದುಗರೂ ಅಂದು ದೊಡ್ಡ ಪ್ರಮಾಣದಲ್ಲಿದ್ದರು). ತ್ರಿವೇಣಿ, ಹಾಗೆಯೇ ಶಿವರಾಮ ಕಾರಂತ, ನಿರಂಜನ, ಕಟ್ಟೀಮನಿ, ಚದುರಂಗ, ವೀರಕೇಸರಿ ಸೀತಾರಾಮ ಶಾಸ್ತ್ರಿ, ಅನುಪಮಾ ನಿರಂಜನ , ದೇವುಡು, ಕೆ. ವಿ. ಅಯ್ಯರ, ಎಮ್. ಕೆ. ಇಂದಿರಾ, ಸೂರ್ಯನಾರಾಯಣ ಚಡಗ, ಭಾರತೀಸುತ, ಮ. ನ. ಮೂರ್ತಿ ಇನ್ನೂ ಸಾಕಷ್ಟು ಜನ ಕಾದಂಬರಿಕಾರರು ನಿರಂತರವಾಗಿ ಬರೆಯುತ್ತಿದ್ದರು. ನಾವೂ ಅಷ್ಟೇ ವೇಗವಾಗಿ ಓದುತ್ತಿದ್ದೆವು. ಕ್ಲಾಸರೂಮಿನಲ್ಲಿ ಶಿಕ್ಷಕರ ಕಣ್ಣು ತಪ್ಪಿಸಿಯೂ ಕಾದಂಬರಿ ಓದುತ್ತಿದ್ದೆವು. ಅಷ್ಟೊಂದು ಹುಚ್ಚು ಹಿಡಿಸಿಬಿಟ್ಟಿದ್ದರು. ಈ ತಳಹದಿಯ ಮೇಲೆಯೇ ಮುಂದೆ ನಾವು ಸಾಹಿತ್ಯಾಭ್ಯಾಸವನ್ನು ವಿಸ್ತರಿಸಿಕೊಂಡಿದ್ದು.

ಪ್ರೇರಣೆ
ತಳುಕಿನ ವೆಂಕಣ್ಣಯ್ಯ, ತ. ಸು. ಶಾಮರಾವ್ ಇವರು ಕನ್ನಡ ವಿದ್ವತ್ ಪ್ರಪಂಚದಲ್ಲಿ ಬಹಳ ದೊಡ್ಡ ಹೆಸರು ಪಡೆದವರು. ತರಾಸು ಅವರು ಆ ವಿದ್ವತ್ಪರಂಪರೆಯಿಂದಲೇ ಬಂದವರು. ಅಂದರೆ ವೆಂಕಣ್ಣಯ್ಯನವರು ದೊಡ್ಡಪ್ಪ. ಶಾಮರಾಯರು ಚಿಕ್ಕಪ್ಪ. ಸುಬ್ಬರಾಯರಿಗೆ ಬರೆಯಲು ಮೊದಲು ಪ್ರೇರಣೆ ನೀಡಿದವರೇ ಟಿ. ಎಸ್. ವೆಂಕಣ್ಣಯ್ಯನವರು. ಸುಬ್ಬರಾಯರು ಒಳ್ಳೇ ಮಾತುಗಾರರಾಗಿದ್ದರು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಎಲ್ಲೆಡೆ ಅವರ ಕ್ರಾಂತಿಕಾರಿ ಭಾಷಣಗಳಾಗುತ್ತಿದ್ದವು. ಆಗ ವೆಂಕಣ್ಣಯ್ಯನವರು ಒಂದು ಸಲ ” ಮಾತು ಸಾಕಯ್ಯಾ , ಬರೆದು‌ತೋರಿಸು ನೋಡೋಣ” ಅಂದರು. ಸರಿ, ಅದನೇ ತರಾಸು‌ ಸವಾಲಾಗಿ ಸ್ವೀಕರಿಸಿದರು. ಅಂದೇ‌ ಒಂದು‌ ಕತೆ ಬರೆದು ತೋರಿಸಿ ದೊಡ್ಡಪ್ಪನ ಹತ್ತಿರ ಹತ್ತು ರೂ. ಬಹುಮಾನವನ್ನೂ ಗಿಟ್ಟಿಸಿಕೊಂಡರು. ಅಲ್ಲಿಂದಾಚೆ ಅವರು ಹಿಂತಿರುಗಿ ನೋಡಲಿಲ್ಲ.

ಕುಟುಂಬ
ತರಾಸು ಕುಟುಂಬ ಮೂಲತಃ ಆಂಧ್ರಪ್ರದೇಶದಿಂದ ಬಂದದ್ದು. ತೆಲುಗು‌ಮಾತೃಭಾಷೆ. ಅದು ಅವರ ತಾತ ಸುಬ್ಬಣ್ಣನ ಕಾಲದಲ್ಲಿ ಬಂದದ್ದು. ತರಾಸು‌ ಹುಟ್ಟಿದ್ದು ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ. ಎಪ್ರಿಲ್ 21, 1920. ತಂದೆ ರಾಮಸ್ವಾಮಿ, ತಾಯಿ ಸೀತಮ್ಮ. ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ ಸುಬ್ಬರಾಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಎರಡು ಸಲ ಜೇಲಿಗೆ ಹೋದರು. 1948 ರ ಕ್ವಿಟ್ ಇಂಡಿಯಾ ಚಳವಳಿ ನಂತರ ಜೇಲಿನಿಂದ ಬಿಡುಗಡೆಯಾದ ತರಾಸು ಅವರು ಮತ್ತೆ ಒಂದು ವರ್ಷ ಹಿರಿಯರ ಒತ್ತಾಯಕ್ಕೆ ಕಾಲೇಜಿಗೆ ಹೋದರಾದರೂ ಶಿಕ್ಷಣ ಮುಂದುವರಿಸದೇ ಬಿಟ್ಟು ಕೆಲಸಕ್ಕೆ ಸೇರಿದರು.

ಪತ್ರಕರ್ತರಾಗಿ ‌ತರಾಸು ಒಟ್ಟು68 ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ನಾಲ್ಕು ಕಥಾ ಸಂಕಲನ, ನಾಲ್ಕು ನಾಟಕಗಳನ್ನು ಬಿಟ್ಟರೆ ಉಳಿದವುಗಳೆಲ್ಲ ಹೆಚ್ಚಾಗಿ ಕಾದಂಬರಿಗಳು. 19 ಸಾಮಾಜಿಕ, 9 ಐತಿಹಾಸಿಕ ಮತ್ತು ಎರಡು ಪೌರಾಣಿಕ ಕಾದಂಬರಿಗಳನ್ನು ಬರೆದರು. ಪಾರಿಜಾತ ಅವರ ಮೊದಲ ಕಾದಂಬರಿ.

ತರಾಸು ಮೊದಲು ಕೆಲಸಕ್ಕೆ ಸೇರಿದ್ದು ವಿಶ್ವ ಕರ್ನಾಟಕ ಪತ್ರಿಕೆ ಉಪಸಂಪಾದಕರಾಗಿ. ೨೫ ರೂ. ಸಂಬಳ. ಕೆಲವೊಮ್ಮೆ ಉಪವಾಸ. ಕಳ್ಳೇಕಾಯಿ ತಿಂದು ಮಲಗುತ್ತಿದ್ದುದೂ‌ ಇತ್ತು. ನಂತರ ವಾಹಿನಿ, ನವೋದಯ ಮೊದಲಾದ ಪತ್ರಿಕೆಗಳು. ಆಮೇಲೆ ಅದೇ ಆಗ ಆರಂಭವಾಗಿದ್ದ ಪ್ರಜಾವಾಣಿ‌ ಪತ್ರಿಕೆ ಸೇರಿದರು. ಅದನ್ನೂ ನಂತರ ಬಿಟ್ಟು ಕತೆ ಕಾದಂಬರಿಗಳನ್ನು ಬರೆಯಲು ತೊಡಗಿದರು.

ತಂದೆ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಇದು ತರಾಸು ಅವರಿಗೆ ಐತಿಹಾಸಿಕ ಕಾದಂಬರಿ ಬರೆಯಲು‌ ಪ್ರೇರಣೆಯಾಯಿತು. ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಹೇಳುತ್ತಿದ್ದ ಚಿತ್ರದುರ್ಗದರಸರ ಕತೆಗಳು ತರಾಸು ಅವರ ಅಮರ ಕೃತಿಗಳಿಗೆ ಮೂಲವೆನಿಸಿದವು. ದುರ್ಗದ ಪ್ರತಿಯೊಂದು‌ ಕಲ್ಲಿನ ಕಥೆವ್ಯಥೆಗಳನ್ನೂ ಬಲ್ಲವರಾಗಿದ್ದರು ತರಾಸು. ಅವು ಜೀವಂತವಾಗಿ ಅವರ ಕೃತಿಗಳಲ್ಲಿ ಮೂಡಿಬಂದವು. ಆದ್ದರಿಂದಲೇ ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗು ಬಾಣ ಹಾಗೂ ದುರ್ಗಾಸ್ತಮಾನದಂತಹ ಅಪೂರ್ವ ಕಾದಂಬರಿಗಳು ಕನ್ನಡಿಗರಿಗೆ ದೊರಕಿದವು.

ತರಾಸು ಅವರ ಏಳು ಕಾದಂಬರಿಗಳು ಸಿನಿಮಾ ಆದವು. ಚಂದವಳ್ಳಿಯ ತೋಟ, ಹಂಸಗೀತೆ, ನಾಗರಹಾವು, ಬೆಂಕಿಯ ಬಲೆ, ಮಸಣದ ಹೂ, ಗಾಳಿಮಾತು, ಬಿಡುಗಡೆಯ ಬೇಡಿ. ಇವುಗಳಲ್ಲಿ ನಾಗರ ಹಾವು ತೆಲುಗು , ತಮಿಳು, ಹಿಂದಿ ಭಾಷೆಗಳಲ್ಲೂ ಸಿನಿಮಾ ಅದರೆ, ಹಂಸಗೀತೆ ಹಿಂದಿಯಲ್ಲಿ ಬಸಂತ ಬಹಾರ ಎಂಬ ಹೆಸರಲ್ಲಿ ಸಿನಿಮಾ ಆಯಿತು.

ಕನ್ನಡದಲ್ಲಿ ಕಾದಂಬರಿ ಆಧಾರಿತ ಮೊದಲ ಚಲನಚಿತ್ರ ಕೃಷ್ಣಮೂರ್ತಿ ಪುರಾಣಿಕರ ” ಧರ್ಮದೇವತೆ” ( ಕರುಣೆಯೇ ಕುಟುಂಬದ ಕಣ್ಣು). ಮತ್ತು ಅತಿ ಹೆಚ್ಚು ಕಾದಂಬರಿಗಳು ಸಿನಿಮಾ ಆದದ್ದೂ‌ ಪುರಾಣಿಕರವೇ. (13), ನಂತರ ತರಾಸು. ಅವರದು.

https://pragati.taskdun.com/vinay-kulakarnidharwada-entry-issuehigh-court/

https://pragati.taskdun.com/this-congress-candidates-honda-activa-scooter-is-worth-90-lakhs/

https://pragati.taskdun.com/17-student-projects-of-kls-git-receives-funding-from-kscst/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button