
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತಿಭಟನೆ ಮಾಡಿದ್ದ ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟದ್ದ ಎಂಇಎಸ್ ನ ಪುಂಡ ಶುಭಂ ಶೆಳಕೆ ಎಂಬುವವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕರ್ನಾಟಕ ಬಂದ್‌ಗೆ ಅಪಹಾಸ್ಯ ಮಾಡಿ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂಬ ಹೇಳಿಕೆ ನೀಡಿದ್ದ ಕಿಡಿಗೇಡಿ ಶೆಳಕೆಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಬೆಳಗಾವಿ ಪೊಲೀಸರು ಕರೆ ತಂದಿದ್ದಾರೆ. ಮಾಳಮಾರುತಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಶೆಳಕೆಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತರಲಾಗಿದ್ದು, ಬಿಮ್ಸ್‌ನಲ್ಲಿ ಅವನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ. ನ್ಯಾಯಾಧೀಶರ ಎದುರು ಪೊಲೀಸರು ಹಾಜರುಪಡಿಸಿದರು. ಬಳಿಕ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನಾಡದ್ರೋಹಿಯನ್ನು ಹಿಂಡಲಗಾ ಜೈಲಿಗೆ ಶಿಪ್ಟ್ ಮಾಡಲಾಗಿದೆ.
ಕನ್ನಡ ಪರ ಹೋರಾಟಗಾರರು ನಾಲಾಯಕರು. ಬಸ್ ಕಂಡಕ್ಟರ್ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಈ ರೀತಿಯ ನೀಚ, ನಾಲಾಯಕ್ ಕಂಡಕ್ಟರ್ ಪರ ನಿಂತ ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು ಎಂದು ಶಳಕೆ ಅವಾಚ್ಯವಾಗಿ ನಿಂದಿಸಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಈ ಬಗ್ಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆ 192, 352, 353 ಸೆಕ್ಷನ್ ಅಡಿ FIR ಸಹ ದಾಖಲಿಸಲಾಗಿತ್ತು.