Belagavi NewsBelgaum NewsKannada NewsKarnataka News

ಮರಾಠಿ ಭಾಷೆಯಲ್ಲಿ ನಡಾವಳಿ ಕೋರಿ ಎಂಇಎಸ್ ಧರಣಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮರಾಠಿ ಭಾಷೆಯಲ್ಲಿ ಪಾಲಿಕೆಯ ಸಭೆಯ ನಡುವಳಿಕೆ ಪತ್ರವನ್ನು ನೀಡಬೇಕೆಂದು ಎಂಇಎಸ್ ಸದಸ್ಯ ರವಿ ಸಾಂಳುಕೆ ನೇತೃತ್ವದಲ್ಲಿ ಮೂವರು ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಧರಣಿ ನಡೆಸಿ ಕೋಲಾಹಲ ಸೃಷ್ಟಿಸಿದರು.

ಬುಧವಾರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಶೋಭಾ ಸೋಮನಾಚೆ ನೇತೃತ್ವದಲ್ಲಿ  ಕರೆಯಲಾಗಿದ್ದ ಸಾಮಾನ್ಯ ಸಭೆ ಆರಂಭದಲ್ಲಿಯೇ ಖ್ಯಾತೆ ತೆಗೆದ ಎಂಇಎಸ್ ಸದಸ್ಯರ ಮೊಂಡುವಾದ ಇಡೀ ಸಭೆಯ ದಿಕ್ಕು ತಪ್ಪಿಸಿತು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲ ಭಾಷಿಕ ಸದಸ್ಯರು ಆಯ್ಕೆಯಾಗಿದ್ದಾರೆ. ನಮಗೆ ಮರಾಠಿ ಭಾಷೆಯಲ್ಲಿ ಪಾಲಿಕೆ ಸಭೆಯ ನಡಾವಳಿಯನ್ನು ನೀಡಬೇಕೆಂದು ಒತ್ತಾಯಿಸಲಾಗಿತ್ತು.‌ ಅದರಂತೆ ಮೇಯರ್ ಒಪ್ಪಿಗೆ ನೀಡಿದ್ದರೂ ಈಗಲೂ ನಮಗೆ ಮರಾಠಿ ಭಾಷೆಯಲ್ಲಿ ಸಭೆಯ ನಡಾವಳಿ ಪತ್ರ ನೀಡಲಿಲ್ಲ ಎಂದು ಆರೋಪಿಸಿ ಎಂಇಎಸ್ ಸದಸ್ಯ ರವಿ ಸಾಳುಂಕೆ ನೇತೃತ್ವದಲ್ಲಿ ನಾಗೇಶ ಮಂಡೋಲ್ಕರ್, ವೈಶಾಲಿ‌ ಬಾತ್ಕಾಂಡೆ ಧರಣಿ ನಡೆಸಿದರು.

ಇದಕ್ಕೆ ಧ್ವನಿಗೂಡಿದ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಮರಾಠಿ ಭಾಷೆಯಲ್ಲಿ ಸಭೆಯ ನಡಾವಳಿಗಳನ್ನು ನೀಡಬೇಕೆಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಎಂಇಎಸ್ ಸದಸ್ಯರು ವಿನಾಕಾರಣ ಗೊಂದಲ ಮಾಡುತ್ತಿದ್ದಾರೆ. ಕಾನೂನು ಪುಸ್ತಕದ ಬಗ್ಗೆ ಅವರಿಗೆ ಅವರಿವಿಲ್ಲ. ಮೇಯರ್ ಗೆ ಅಧಿಕಾರ ಇದೆ. ಕಾನೂನು ತಜ್ಞರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮೇಯರ್ ಶೋಭಾ ಸೋಮನಾಚೆ ಮಾತನಾಡಿ, ಭಾಷಾಂತರ ಮಾಡುವವರು ಇಲ್ಲದೆ‌ ಇರುವುದರಿಂದ ಅವರು ಬಂದ ಕೂಡಲೇ ನೀಡಲಾಗುವುದು ಎಂದರು.

ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ಡಾಟಾ ಎಂಟ್ರಿ ಮಾಡುವ 40 ಜನ ಹೊರ ಗುತ್ತಿಗೆದಾರರನ್ನು ನೇಮಕ ಮಾಡಲು ಮೇಯರ್ ಶೋಭಾ ಸೋಮನಾಚೆ ಸದಸ್ಯರ ಅನುಮತಿ ಮೇರೆಗೆ ಠರಾವ್ ಪಾಸ್ ಮಾಡಿದರು.

ರಾಮತೀರ್ಥ ನಗರವನ್ನು ಬೆಳಗಾವಿ ಪಾಲಿಕೆಗೆ ಹಸ್ತಾಂತರಿಕೊಳ್ಳಬೇಕೆಂದು ಪಾಲಿಕೆ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಒತ್ತಾಯಿಸಿದರು. ಕುಮಾರಸ್ವಾಮಿ ಬಡಾವಣೆ ಹಸ್ತಾಂತರ ಪ್ರಕ್ರಿಯೆಯ ಮಾದರಿಯಲ್ಲೇ ರಾಮತೀರ್ಥ ನಗರವನ್ನು ಪಾಲಿಕೆ  ವ್ಯಾಪ್ತಿಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶೋಭಾ, ರಾಮತೀರ್ಥ ನಗರವನ್ನು ಪಾಲಿಕೆಗೆ ಹಸ್ತಾಂತರಿಸುವ ವಿಷಯದ ಕುರಿತು ಕಮಿಟಿಯ ಸಲಹೆ ಪಡೆದುಕೊಂಡು ಪ್ರಕ್ರಿಯೆ ಆರಂಭಿಸಲು ಠರಾವ್ ಪಾಸ್ ಮಾಡಿದರು.

ಶ್ರೀನಗರದ ಅನುಭವ ಮಂಟಪದ ಕಟ್ಟಡದ ಎದುರುಗಡೆ ಸ್ಮಾರ್ಟ್ ಸಿಟಿ ಪಿಪಿಪಿ ಕೆಲಸ‌‌ ಮಾಡುತ್ತಿರುವುದನ್ನು ತಡೆಯಲು ಮೇಯರ್ ಠರಾವ್ ಪಾಸ್ ಮಾಡಿದರು.

ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ವ್ಯಾಪಕ‌ ಚರ್ಚೆ ನಡೆಯಿತು. ಹಿಂದಿನ ಸಭೆಯಲ್ಲಿ ಪಾಲಿಕೆಯ ಎಲ್ಲ‌ ಸದಸ್ಯರು ಒತ್ತಾಯಿದ್ದರು. ನಗರದ ಅಭಿವೃದ್ಧಿ ವಿಷಯದಲ್ಲಿ ಎಲ್ಲ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಒಬ್ಬಿಬ್ಬರನ್ನು ಗುರಿಯಾಗಿಸಿಕೊಂಡು ಸಭೆಯಲ್ಲಿ ಠರಾವ್ ಪಾಸ್ ಮಾಡುವುದು ಸರಿಯಲ್ಲ ಎಂದು ಶಾಸಕ ಆಸೀಫ್ ಸೇಠ್ ತಿಳಿಸಿದರು.

ಬಿಜೆಪಿ‌ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ ಪಾಲಿಕೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಪಟ್ಟಿಮಾಡಿ ಸರಕಾರಕ್ಕೆ ಕಳುಹಿಸಿಕೊಡಿ ಎಂದಿದ್ದರು. ಅದೇ ಪ್ರಕಾರ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಯಾವ ಸದಸ್ಯರೂ ಅಧಿಕಾರಿಗಳನ್ನು‌ ಗುರಿಯಾಗಿಸಿಕೊಂಡು ಚರ್ಚೆ ಮಾಡಿಲ್ಲ ಎಂದು ಸಭೆಗೆ ತಿಳಿಸಿದರು.

ವಿಪಕ್ಷ ನಾಯಕನಾಗಿ ಡೋಣಿ ನೇಮಕ

ಪಾಲಿಕೆಯ ಕಾಂಗ್ರೆಸ್ ಪಾಲಿಕೆ ಸದಸ್ಯ ಮುಜಮಿಲ್ಲ ಡೋಣಿ ಅವರಿಗೆ ವಿಪಕ್ಷ ನಾಯಕರಾಗಿ ವಿಪಕ್ಷಗಳು ನಿರ್ಧಾರ ಮಾಡಿದ್ದಂತೆ ಮೇಯರ್ ಶೋಭಾ ಸೋಮನಾಚೆ ಘೋಷಣೆ ಮಾಡಿದರು.

ಮೃತಪಟ್ಟರವರಿಗೆ ಸಾಂತ್ವನ

ಶಾಹುನಗರದಲ್ಲಿ ವಿದ್ಯುತ್ ಅವಘಡದಿಂದ ಮೂವರು ಜನ ಹಾಗೂ ಪಾಲಿಕೆಯ ಸಿಬ್ಬಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಸಭೆಗೂ ಮುನ್ನ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮೊದಲಾದವರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button