*ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ: ಎಂಇಎಸ್ ನಿಂದ ಲಕ್ಷ ಸಹಿ ಸಂಗ್ರಹ ಅಭಿಯಾನ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ : ಪಟ್ಟಣದಲ್ಲಿ ಮಂಗಳವಾರ ನಡೆದ ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ಮಹಾರಾಷ್ಟ್ರ–ಕರ್ನಾಟಕ ಗಡಿವಿವಾದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿ 22 ವರ್ಷ ಕಳೆದರೂ ಈ ಪ್ರಕರಣದ ವಿಚಾರಣೆ ನಡೆದು ತೀರ್ಪು ಹೊರಬಂದಿಲ್ಲ. ಆದ್ದರಿಂದ ಈ ಪ್ರಕರಣದ ಶೀಘ್ರ ಹಾಗೂ ತ್ವರಿತ ವಿಚಾರಣೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಲು ಎಂಇಎಸ್ ವತಿಯಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲು ಮತ್ತು ಗಡಿಭಾಗದ ಮರಾಠಿ ಭಾಷಿಕರ ಒಂದು ಲಕ್ಷ ಸಹಿಗಳನ್ನು ಸಂಗ್ರಹಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಭೆ ಉದ್ದೇಶಿಸಿ ಮಾತನಾಡಿದ ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಗೋಪಾಳ ದೇಸಾಯಿ, “ಗಡಿಭಾಗದ ಮರಾಠಿ ಭಾಷಿಕರ ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗಾಗಿ ಎಂಇಎಸ್ ಈ ಸಹಿ ಸಂಗ್ರಹ ಅಭಿಯಾನವನ್ನು ಆಯೋಜಿಸಿದೆ. ಇದನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಡೆಸಲಾಗುವುದು. ಗಡಿಭಾಗದ ಪ್ರತಿಯೊಬ್ಬ ಮರಾಠಿ ಭಾಷಿಕರು ಗಡಿ ತೀರ್ಪು ಮರಾಠಿಗರ ಪರವಾಗಿ ಬರುವಂತೆ ಆಗ್ರಹಿಸಲು ಈ ಅಭಿಯಾನದಲ್ಲಿ ಪಾಲ್ಗೊಳ್ಖಬೇಕು. ಬೆಳಗಾವಿ, ನಿಪ್ಪಾಣಿ, ಕಾರವಾರ, ಭಾಲ್ಕಿ, ಬೀದರ ಭಾಗದ ಎಲ್ಲ ಮರಾಠಿಗರು ಸ್ವಯಂಪ್ರೇರಿತರಾಗಿ ಸಹಿ ಮಾಡುವ ಮೂಲಕ ಮರಾಠಿ ಭಾಷಿಕರು ವಾಸಿಸುವ ಭಾಗವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರುವ ಸಲುವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದಿಗಂಬರ ಪಾಟೀಲ ಸೇರಿದಂತೆ ಎಂಇಎಸ್ ಮುಖಂಡರು, ಕಾರ್ಯಕರ್ತರು ಇದ್ದರು.




