Karnataka NewsLatest

*ಮೀಟರ್ ಬಡ್ಡಿ ದಂಧೆ; 25 ಕುಳಗಳಿಗೆ ಕೋಳ!*

ನಾಗರಿಕರ ದೂರುಗಳಿಗೆ ಸ್ಪಂದಿಸಿದ ಖಡಕ್ ಪೊಲೀಸ್ ಕಮೀಷನರ್

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಕುಳಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. 25 ದಂಧೆಕೋರರನ್ನು ಬಂಧಿಸಿದ್ದಾರೆ.

ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮೀಟರ್ ಬಡ್ಡಿ ಹಾವಳಿಯ ಬಗ್ಗೆ ನೋವು ತೋಡಿಕೊಂಡಿದ್ದರಲ್ಲದೇ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡುವಂತೆ ಮನವಿ ಮಾಡಿದ್ದರು.


ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಪತ್ತೆಗೆ ಮುಂದಾಗಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ 7 ಪ್ರಕರಣ ದಾಖಲಿಸಿ 25 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಧಾರವಾಡದ ಉಪನಗರ ಠಾಣೆ-2, ಶಹರ ಠಾಣೆ-2, ಪ್ರಕರಣ ವಿದ್ಯಾನಗರ ಠಾಣೆ-2 ಹಾಗೂ ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ. ಬಂಧಿತರಿಂದ 10 ದ್ವಿಚಕ್ರ ವಾಹನಗಳು, 10 ಮೊಬೈಲ್, ಹರಿತವಾದ ಆಯುಧ, ಮೀಟರ್ ಬಡ್ಡಿ ದಂಧೆಯ ವಿವರ ನಮೋದಿಸಿದ ದಾಖಲೆಗಳು, ಬಾಂಡ್ ಗಳನ್ನು ಜಪ್ತು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರರಿಗೆ ತಿಳಿಸಿದರು.
ಆರಂಭಿಕ ಹಂತದಲ್ಲಿ ಇಷ್ಟು ಪ್ರಕರಣಗಳನ್ನು ದಾಖಲಿಸಿ ದಂಧೆಯಲ್ಲಿ ತೊಡಗಿರುವ ಬಗ್ಗೆ ಸೂಕ್ತ ದಾಖಲೆಗಳು ದೊರೆತ ಹಿನ್ನೆಲೆಯಲ್ಲಿ 25 ಜನರನ್ನು ಬಂಧಿಸಲಾಗಿದೆ. ಸಾರ್ವಜನಿಕರು ಯಾವುದಾದರೂ ಮೀಟರ್ ಬಡ್ಡಿ ದಂಧೆಗೆ ಸಿಲುಕಿದ್ದರೆ ಸೂಕ್ತ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದರು.

Home add -Advt


ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4ಆರೋಪಿಗಳ ಮೇಲೆ 2ಪ್ರಕರಣ ದಾಖಲು ಮಾಡಿದ್ದು, ಹುಸೇನಸಾಬ್ ದೊಡ್ಡಮನಿ, ಅರ್ಬಾಜ ಮಕ್ತುಮಸಾಬ, ರಿಜ್ವಾನ್ ಬೆಟಗೇರಿ, ಆಮೀರ್ ಮುಲ್ಲಾನಿ ಇವರಿಂದ ಬಾಂಡ್ ಪೇಪರ್ ಗಳು, ಖಾಲಿ ಚೆಕ್, ಸಾಲದ ಮಾಹಿತಿಯಿರುವ ಬುಕ್ ಹಾಗೂ ಒತ್ತೆ ಇಟ್ಟುಕೊಂಡ 1 ಸ್ಕೂಟಿ ಮತ್ತು ವಾಹನದ ಮೂಲ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.


ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಆರೋಪಿಗಳ ಮೇಲೆ 2 ಪ್ರಕರಣ ದಾಖಲು ಮಾಡಿದ್ದು, ಜಾಫರ್, ಧಾರವಾಡ ನಿಜಾಮುದ್ದೀನ್ ಕಾಲೋನಿಯ ಮೊಪಿನ, ಸವಿತಾ ಕಳ್ಳಿಮನಿ, ರತ್ನವ್ವ ಗಂಭೀರ ಇವರಿಂದ ಒಂದು ಹೊಂಡಾ ಕಂಪನಿ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.


ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5ಆರೋಪಿಗಳ ಮೇಲೆ 2 ಪ್ರಕರಣ ದಾಖಲಾಗಿದ್ದು, ಚಕ್ರಪಾಣಿ ಕುಲಕರ್ಣಿ, ಕಿಲ್ಲೇದಾರ, ಮಸೂದ್ದಿನ ಕಿಲ್ಲೆದಾರ ಹಾಗೂ ಇನ್ನೂ ಇಬ್ಬರನ್ನು ಬಂಧಿಸಲಾಗುವುದು ಎಂದ ಅವರು ಇವರಿಂದ 3ಬಾಂಡ್ ಗಳು ಹಾಗೂ 3 ಖಾಲಿ ಚೆಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.


ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 13 ಆರೋಪಿತರ ಮೇಲೆ ದಾಖಲಾಗಿದ್ದು, ಆದಿತ್ಯ ಸಣ್ಣತಂಗಿ, ಮಯೂರ ಚಾಕಲಬ್ಬಿ, ಮಹಾಂತೇಶ್ ಹೊಸಮನಿ, ಅಭಿಷೇಕ ಪಗಲಾಪೂರ, ಅರ್ಜುನ ಗಾಯಕವಾಡ, ಕೈಬೂಸಾಬ ಮುಲ್ಲಾ, ಅಜಯ ಸಿಂಗನಹಳ್ಳಿ, ಆನಂದ ಗೋಕಾಕ್, ಮಂಜುನಾಥ ಕೊರವರ, ಕಿರಣ್ ಕೊರವರ, ಕಿರಣ್ ದಾಮೋದರ್ ಹಾಗೂ ಗಣೇಶ್ ಇವರಿಂದ ಇವರಿಂದ ಸಾಲದ ವ್ಯವಹಾರದ ನಮೂದಿಸುವ ದಾಖಲೆಗಳು, 10ವಿವಿಧ ಕಂಪನಿಯ ಮೊಬೈಲ್ ಫೋನ್ ಗಳು, 8 ದ್ವಿಚಕ್ರ ವಾಹನಗಳು, 2 ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 10ಬೈಕುಗಳು, 10 ಮೊಬೈಲ್ ಫೋನ್‌ಗಳು ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Related Articles

Back to top button