*ಮಿಚಾಂಗ್ ಚಂಡಮಾರತಕ್ಕೆ 8 ಜನರು ಸಾವು; ತಮಿಳುನಾಡು ಬಳಿಕ ಆಂಧ್ರ ಕರಾವಳಿಗೆ ಅಪ್ಪಳಿಸಿದ ಸೈಕ್ಲೋನ್*
8 ಜಿಲ್ಲೆಗಳಲ್ಲಿ ಕಟ್ಟೆಚ್ಚರ
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಮಿಚಾಂಗ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಮಿಚಾಂಗ್ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಈವರೆಗೆ 8 ಜನರು ಸಾವನ್ನಪ್ಪಿದ್ದಾರೆ. ಬಿರುಗಾಳಿ ಗಂತೆಗೆ 100 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಭಾರಿ ಮಳೆಯಾಗುತ್ತಿದೆ. ಬಿರುಗಾಳಿ, ಮಳೆಯಿಂದಾಗಿ ವಿದ್ಯುತ್ ಕಂಬಗಳು ದರೆಗುರುಳಿದ್ದು, ಎರಡು ದಿನಗಳಿಂದ ಚನ್ನೈ ನಗರದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ರಸ್ತೆಗಳು, ಮನೆಗಳು, ಅಪಾರ್ಟ್ ಮೆಂಟ್, ಬಸ್, ರೈಲು, ಮೆಟ್ರೋ, ವಿಮಾನ ನಿಲ್ದಾಣಗಳಿಗೂ ನೀರು ನುಗ್ಗಿದ್ದು, ತಮಿಳುನಾಡಿನ ಪ್ರಮುಖ ನಗರಗಳು ಸಂಪೂರ್ಣ ಜಲಾವೃತಗೊಂಡಿವೆ. ಹವಾಮಾನ ವೈಪರಿತ್ಯದಿಂದಾಗಿ ನಿನ್ನೆಯಿಂದ ಸ್ಥಗಿತಗೊಂಡಿದ್ದ ಚೆನ್ನೈ ಏರ್ ಪೋರ್ಟ್ ಇಂದು ಕಾರ್ಯಾರಂಭವಾಗಿದೆ.
ಇನ್ನೊಂದೆಡೆ ತಮಿಳುನಾಡಿಗೆ ತೆರಳಬೇಕಿರುವ 53 ರೈಲುಗಳನ್ನು ರದ್ದುಪಡಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿದ್ದು, ಚೆನ್ನೈ ನಗರಿಅಲ್ಲಿ ಜಲಪ್ರಳಯ ಸಂಭವಿಸಿದೆ.
ಈ ನಡುವೆ ಮಿಚಾಂಗ್ ಚಂಡಮಾರುತ ಆಂಧ್ರದ ಬಾಪಟ್ಲಾ ಕಡಲ ತೀರಕ್ಕೆ ಅಪ್ಪಳಿಸಿದ್ದು, ಆಂಧ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಆಂಧ್ರಪ್ರದೇಶದ 8 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಡಿಸೆಂಬರ್ 7ರವರೆಗೂ ಚಂಡಮಾರುತದ ಪ್ರಭಾವ ಇರಲಿದ್ದು, ನೆಲ್ಲೂರು, ತಿರುಪತಿ, ಪ್ರಕಾಶಂ, ಬಾಪಟ್ಲಾ, ಕೋನಾಸೀಮಾ, ಕಾಕಿನಾಡ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ