
ಪ್ರಗತಿವಾಹಿನಿ ಸುದ್ದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಸುಗ್ರೀವಾಜ್ಞೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ನೀಡಿದ ಸೂಚನೆ ಪ್ರಮುಖಾಂಶಗಳು:
• ಸುಗ್ರೀವಾಜ್ಞೆಯ ಉದ್ದೇಶ ವಿಫಲವಾಗಬಾರದು.
• ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರಿಗೆ ಯಾವುದೇ ಕಿರುಕುಳ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕಾಯ್ದೆಯ ಎಲ್ಲಾ ಅಂಶಗಳನ್ನು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು.
• ಪರವಾನಿಗೆ ಪಡೆಯದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿರಂತರ ನಿಗಾ ಇರಿಸಬೇಕು. ಪರವಾನಿಗೆ ಪಡೆದಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್‌ಬಿಐ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದನ್ನು ಖಾತ್ರಿಪಡಿಸಬೇಕು. ಬಲವಂತದ ವಸೂಲಾತಿ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
• ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸಹಾಯವಾಣಿ ಪ್ರಾರಂಭಿಸಲು ಸೂಚಿಸಲಾಗಿದ್ದು, ಬಲವಂತದ ಸಾಲ ವಸೂಲಾತಿ ಮಾಡುವ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಬೇಕು.
• ಸಾಲ ನೀಡುವವರಿಗೆ ತೊಂದರೆ ಉಂಟು ಮಾಡುವ ಯಾವುದೇ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಆದರೆ ಬಲವಂತದ ವಸೂಲಾತಿ, ಮಾನಹಾನಿ, ಕಿರುಕುಳದ ಮೂಲಕ ಸಾಲ ವಸೂಲಾತಿಯನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
• ಯಾವುದೇ ಜಿಲ್ಲೆಗಳಲ್ಲಿ ಸಾಲಗಾರರ ಕಿರುಕುಳ ಮುಂದುವರೆದಿರುವುದು ಗಮನಕ್ಕೆ ಬಂದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
• ಕಾಯ್ದೆ ಜಾರಿಗೊಳಿಸಿದ ಬಳಿಕ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದು, ಕಟ್ಟುನಿಟ್ಟಿನಿಂದ ಕಾಯ್ದೆಯ ಅಂಶಗಳನ್ನು ಜಾರಿಗೊಳಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ದರ್ಶಿ ಎಲ್.ಕೆ.ಅತೀಕ್, ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.