Karnataka NewsLatest

ರಾಯಬಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹಾಲು ಸಂಸ್ಕರಣ ಘಟಕ ನಿರ್ಮಾಣ

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ರಾಯಬಾಗ, ಚಿಕ್ಕೋಡಿ, ಅಥಣಿ ಭಾಗದ ರೈತರ ಹಾಲು ಶೇಖರಿಸಲು ರಾಯಬಾಗದಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ಹಾಲು ಸಂಸ್ಕರಣ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಾಯಬಾಗ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಯಬಾಗದಲ್ಲಿ ಈಗಾಗಲೇ ಹಾಲು ಸಂಸ್ಕರಣ ಘಟಕ ಕಾಮಗಾರಿ ಪ್ರಗತಿಯಲ್ಲಿದೆ. ಕೆಎಂಎಫ್‌ದಿಂದ ೩ ಕೋಟಿ ರೂ.ಗಳನ್ನು ನೀಡಿದ್ದು, ಉಳಿದ ೭ ಕೋಟಿ ರೂ.ಗಳನ್ನು ಬೆಳಗಾವಿ ಹಾಲು ಒಕ್ಕೂಟ ನೀಡಿದೆ. ನಾಲ್ಕು ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ ಎಂದು ಹೇಳಿದರು.
ರಾಯಬಾಗದಲ್ಲಿ ಹಾಲು ಸಂಸ್ಕರಣ ಘಟಕವನ್ನು ಪ್ರಾರಂಭಿಸುವುದರಿಂದ ಮೂರು ತಾಲೂಕುಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಅನುಕೂಲವಾಗಲಿದೆ. ಹೈನುಗಾರಿಕೆಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳು ಹಾಲು ಉತ್ಪಾದಕರಿಗೆ ದೊರೆಯಲಿದೆ. ದಿನಂಪ್ರತಿ ಒಂದು ಲಕ್ಷ ಲೀಟರ್‌ವರೆಗೆ ರೈತರ ಹಾಲನ್ನು ಸಂಸ್ಕರಿಸಿ ತಂಪುಗೊಳಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಬೆಳಗಾವಿಯಲ್ಲಿ ಮಾಡಲಾಗುತ್ತಿರುವ ಹಾಲಿನ ಪಾಕೇಟ್‌ಗಳನ್ನು ಸಹ ರಾಯಬಾಗ ಶಿಥಲೀಕರಣ ಕೇಂದ್ರದಲ್ಲಿ ತಯಾರಿಸುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.
ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿ ಉನ್ನತಿ ಮತ್ತು ಪ್ರಗತಿಗಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮ ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿ ಹಾಲು ಒಕ್ಕೂಟಗಳ ಬೆಳವಣಿಗೆಗೆ ಸಹಕರಿಸುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ರೈತರಲ್ಲಿ ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಮತ್ತು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಅವರು ರಾಯಬಾಗ ತಾಲೂಕು ಹಾಲು ಒಕ್ಕೂಟಗಳಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿದರು.
ಈ ಸಂದರ್ಭದಲ್ಲಿ ಸಾತಗೌಡ ಪಾಟೀಲ, ಬಸಪ್ಪ ನಾಗೋಡ, ಲಕ್ಷ್ಮೀಕಾಂತ ದೇಸಾಯಿ, ಲಗಮಣ್ಣಾ ಕಟ್ಟಿಕಾರ, ಮನೋಹರ ನಾನಪ್ಪಗೋಳ, ಬಸವರಾಜ ನನದಿ, ಭೀಮಣ್ಣಾ ನಾನಪ್ಪಗೋಳ, ಬೈರು ನನದಿ, ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button