ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಲಾಕ್ ಡೌನ್ ಘೋಷಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದರೂ ಸ್ವತ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರ ಬೇಜವಾಬ್ದಾರಿ ತನದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಡೀ ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿ ಸಿಲುಕಿರುವಂತಹ ಸಂದರ್ಭದಲ್ಲೂ ಬೇಜವಾಬ್ದಾರಿ ತನ ತೋರಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ, ಇಲ್ಲದಿದ್ದರೆ ಅವರನ್ನು ಸಂಪುಟದಿಂದ ಹೊರಹಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಮಕ್ಕಳ ಜೊತೆ ಈಜುಕೊಳದಲ್ಲಿ ಆಟವಾಡುತ್ತಿದ್ದ ಪೋಟೋವನ್ನು ನಿನ್ನೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಸಚಿವ ಸುಧಾಕರ್, ತುಂಬಾ ದಿನಗಳ ನಂತರ ನಾನು ನನ್ನ ಮಕ್ಕಳ ಜೊತೆ ಈಜುಕೊಳದಲ್ಲಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದರು.
ಸಚಿವರ ನಡೆಗೆ ಹಲವರು ತರಾಟೆಗೆ ತೆಗೆದುಕೊಂಡಿದ್ದರು. ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಚಿವ ಸುಧಾಕರ್ ತಮ್ಮ ಟ್ವಿಟರ್ ಅಕೌಂಟ್‌ನಿಂದ ಆ ಪೋಟೋವನ್ನು ಡಿಲೀಟ್ ಮಾಡಿದ್ದಾರೆ. ಈ ಪ್ರಕರಣದ ಕುರಿತು ಮಾಜಿ ಸಚಿವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇಡೀ ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ, ಕರೋನಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಈಜುಕೊಳದಲ್ಲಿ ಸಮಯ ಕಳೆಯುವ ಮೂಲಕ ಬೇಜವಾಬ್ದಾರಿ ತನದಿಂದ ವರ್ತಿಸಿದ್ದಾರೆ. ಇದು ನೈತಿಕ ಮಾನದಂಡಗಳ ವಿಷಯವಾಗಿದ್ದು, ಅವರು ತಮ್ಮ ಸ್ವಂತ ಇಚ್ಚೆಯಿಂದ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ