Kannada NewsKarnataka NewsPolitics

*ತ್ವರಿತವಾಗಿ ಸಿಎಫ್ ಇ, ಸಿಎಫ್ಓ ಅರ್ಜಿ ವಿಲೇವಾರಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ*

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪಾರದರ್ಶಕತೆ ತನ್ನಿ: ಈಶ್ವರ ಖಂಡ್ರೆ ಕರೆ

ಪ್ರಗತಿವಾಹಿನಿ ಸುದ್ದಿ: ಕೈಗಾರಿಕಾ ಘಟಕಗಳ ಸ್ಥಾಪನೆ ಮತ್ತು ಕಾರ್ಯಾಚರಣೆ (ಸಿ.ಎಫ್.ಇ ಮತ್ತು ಸಿಎಫ್.ಓ)ಗೆ ಅನುಮತಿ ಕೋರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನು ಸಮರ್ಪಕವಾಗಿ ಪರಾಮರ್ಶಿಸಿ ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜೂನ್ 7ರ ಅಂತ್ಯದವರೆಗೆ ಮಂಡಳಿಯಲ್ಲಿ ಮೂಲಸೌಕರ್ಯ, ಗಣಿ ಸೇರಿದಂತೆ ಕೈಗಾರಿಕಾ ಘಟಕ ಸ್ಥಾಪನೆ/ ವಿಸ್ತರಣೆ ಸಂಬಂಧ ಬಂದಿರುವ –(ಸಿ.ಎಫ್.ಇ) ಮತ್ತು ಘಟಕ ಸ್ಥಾಪನೆಯ ನಂತರ ಕಾರ್ಯಾಚರಣೆ ಮಾಡಲು ಅನುಮತಿ ಕೋರಿ ಬಂದಿರುವ (ಸಿ.ಎಫ್.ಓ). ಒಟ್ಟು 769 ಅರ್ಜಿಗಳು ಬಾಕಿ ಇದ್ದು, ಈ ಅರ್ಜಿಗಳೆಲ್ಲವನ್ನೂ ಸಭೆಯಲ್ಲಿ ಮಂಡಿಸಿ, ಅಗತ್ಯವಿರುವ ಅನುಸರಣೆಗಳ ಬಳಿಕ ತ್ವರಿತವಾಗಿ ಅನುಮತಿ ನೀಡಬೇಕು ಇಲ್ಲವೇ ಅರ್ಜಿ ತಿರಸ್ಕರಿಸಬೇಕು ಎಂದು ತಿಳಿಸಿದರು.

ಒಂದೊಮ್ಮೆ ಸಿಎಫ್.ಇ ಮತ್ತು ಸಿಎಫ್.ಓ. ಅರ್ಜಿಗಳನ್ನು ದೀರ್ಘಕಾಲದವರೆಗೆ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದಲ್ಲಿ ಸಂಬಂಧಿತ ಅಧಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

3 ದಿನಗಳಲ್ಲಿ ಪ್ರಮಾಣಪತ್ರ ನೀಡಲು ಆದೇಶ:

ಸಿ.ಎಫ್.ಇ ಮತ್ತು ಸಿ.ಎಫ್.ಓ. ಅರ್ಜಿಗಳಿಗೆ ಅನುಮತಿ ನೀಡುವ ಸಂಬಂಧ ನಡೆಸಲಾಗುವ ಸಭೆಯ ಬಳಿಕ ಅಂಗೀಕಾರಗೊಂಡ ಅರ್ಜಿಗಳಿಗೆ ಸಂಬಂಧಿಸಿದಂತೆ 3 ದಿನಗಳ ಒಳಗಾಗಿ ಪ್ರಮಾಣ ಪತ್ರವನ್ನು ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಅಪ್ ಲೋಡ್ ಮಾಡಬೇಕು. ಇದರಲ್ಲಿ ಅನಗತ್ಯ ವಿಳಂಬ ಮಾಡಬಾರದು. ಮಂಡಳಿಯಲ್ಲಿ ಪಾರದರ್ಶಕತೆ ಇರಬೇಕು ಎಂದು ಸೂಚನೆ ನೀಡಿದರು. 

ಸಭೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರೇತರ  ಸದಸ್ಯರುಗಳಾದ ಶರಣಕುಮಾರ್ ಮೋದಿ, ಡಾ.ಪ್ರದೀಪ್ ಸಿ, ಮರಿಸ್ವಾಮಿ ಗೌಡ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ.ರವಿ ಮತ್ತಿತರರು ಉಪಸ್ಥಿತರಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button