ಮೃತ ರೈತ ದಂಪತಿ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ; ಲಕ್ಷ್ಮೀತಾಯಿ ಫೌಂಡೇಷನ್ ನಿಂದ ನೆರವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಮೃತಪಟ್ಟ ಬಿಜಗರಣಿ ಗ್ರಾಮದ ಅಮಿತ್ ದೇಸಾಯಿ ಹಾಗೂ ಲತಾ ದಂಪತಿ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ ಹೇಳಿದರು.
ಇದೇ ವೇಳೆ ಅಳಿಯ ಮತ್ತು ಮಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ತಾಯಿ ಚಂದ್ರಮಾಲಾ ದೇಸಾಯಿ ಅವರನ್ನು ಸಂತೈಸಿದ ಅವರು, ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ನೀಡಿ, ಸರಕಾರದಿಂದಲೂ ಪರಿಹಾರ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.
ಕಿರಿಯ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ದಂಪತಿಯ ಅನನ್ಯ ಎಂಬ 2 ವರ್ಷದ ಹೆಣ್ಣು ಮಗುವನ್ನು ಕಂಡು ಮರುಗಿದ ಲಕ್ಷ್ಮೀ ಹೆಬ್ಬಾಳಕರ, “ಆ ಮಗುವಿನ ಮುಖ ನೋಡಿ ಕರುಳು ಕಿತ್ತು ಬಂದಂತಿದೆ, ವಿಧಿ ನಿಜಕ್ಕೂ ಕ್ರೂರಿ. ಚಿಕ್ಕ ಮಗು ಅನನ್ಯ ತಂದೆ ತಾಯಿಯನ್ನು ಕಳೆದುಕೊಂಡ ನೋವು ಯಾವ ಮಗುವಿಗೂ ಬಾರದಿರಲಿ,” ಎಂದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ತಹಸೀಲ್ದಾರ, ಉಪ ವಿಭಾಗಾಧಿಕಾರಿ, ಕೆಇಬಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಆರ್ ಐ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ