Election NewsKannada NewsKarnataka NewsLatestPolitics

ಸಿಎಂ ಸಿದ್ದರಾಮಯ್ಯಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಬೆಳಗಾವಿ ವಚನ

ಎಲ್ಲರೂ ಒಟ್ಟಾಗಿ ಅಖಾಡಕ್ಕೆ ಇಳಿದಿದ್ದೇವೆ. ಎರಡೂ ಕ್ಷೇತ್ರದಲ್ಲೂ ಗೆದ್ದು ಬಂದು ಈ ಗೆಲುವನ್ನು ನಿಮಗೆ ಅರ್ಪಿಸುತ್ತೇವೆ: ಸಿಎಂ ಗೆ ಭರವಸೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ನಾವು ನಡೆಸಿರುವ ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಒಗ್ಗಟ್ಟಾಗಿ ಚುನಾವಣೆ ಮಾಡಿ. ಉತ್ತರ ಕನ್ನಡ ಜಿಲ್ಲೆ ಸೇರಿ ಬೆಳಗಾವಿಯ ಜಿಲ್ಲೆಗಳಿಗೆ ಒಳಪಡುವ ಮೂರೂ ಲೋಕಸಭಾ ಕ್ಷೇತ್ರಗಳಲ್ಲೂ ಖಚಿತವಾಗಿ ಗೆಲುವು ಸಾಧಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕಾವೇರಿಯಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿಗಳು ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐದು ಗ್ಯಾರಂಟಿ ಯೋಜನೆಗಳು ಬೆಳಗಾವಿ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಮತ್ತು ಮಹಿಳೆಯರ ಬದುಕಿನ ಸಂಕಟವನ್ನು ಕಡಿಮೆ ಮಾಡಿವೆ. ಇದಕ್ಕಾಗಿ ಯುವತಿಯರು ಮತ್ತು ಮಹಿಳೆಯರು ಶೇ80 ರಷ್ಟು ನಮ್ಮ ಪರವಾಗಿ ಇದ್ದಾರೆ ಎನ್ನುವ ಸಕಾರಾತ್ಮಕ ವರದಿ ಸಮೀಕ್ಷೆಗಳಿಂದ ಹೊರ ಬಂದಿವೆ. ನಾವು ಜನರ ಮನೆ ಬಾಗಿಲಿಗೆ ಹೋಗಿ ಪ್ರತೀ ತಿಂಗಳು ಪ್ರತೀ ಕುಟುಂಬಕ್ಕೆ 5-6 ಸಾವಿರ ರೂಪಾಯಿ ಕೊಡುತ್ತಿರುವ ಮತ್ತು ವರ್ಷಕ್ಕೆ 50-60 ಸಾವಿರ ಪ್ರತಿ ಕುಟುಂಬದ ಖಾತೆಗೆ ಜಮೆ ಆಗುತ್ತಿರುವುದನ್ನು ಮನವರಿಕೆ ಮಾಡಿಸಿ, ಜನರ ನಡುವೆ ಗಟ್ಟಿಯಾಗಿ ನಿಂತು ಗೆದ್ದು ಬನ್ನಿ ಎಂದು ಸಿಎಂ ಕರೆ ನೀಡಿದರು.

ಮುಖ್ಯಮಂತ್ರಿಗಳ ಭರವಸೆಯ ಮಾತುಗಳಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬೆಳಗಾವಿಯಲ್ಲಿ ನಾವು ಎಲ್ಲರೂ ಒಟ್ಟಾಗಿ ಅಖಾಡಕ್ಕೆ ಇಳಿದಿದ್ದೇವೆ. ಎರಡೂ ಕ್ಷೇತ್ರದಲ್ಲೂ ಗೆದ್ದು ಬಂದು ಈ ಗೆಲುವನ್ನು ನಿಮಗೆ ಅರ್ಪಿಸುತ್ತೇವೆ ಎಂದರು.

ಉತ್ತರ ಕನ್ನಡದಲ್ಲಿ ಬದಲಾವಣೆ ವಾತಾವರಣ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಜನರ ಈ ಬಾರಿ ಬದಲಾವಣೆ ಬಯಸಿರುವುದು, ಹಿಂದಿನ ಸಂಸದರು ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎನ್ನುವ ಅಭಿಪ್ರಾಯಗಳು ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯಗಳು ಸಮೀಕ್ಷೆಗಳಲ್ಲಿ ವ್ಯಕ್ತವಾಗಿವೆ. ಹೀಗಾಗಿ ಇಲ್ಲೂ ಗೆಲುವಿನ ಅವಕಾಶಗಳು ಇವೆ ಎನ್ನುವ ಬಗ್ಗೆಯೂ ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿ ಮಾಜಿ ಸಚಿವರಾದ ಲಕ್ಷ್ಮಣ್ ಸವದಿ ಮತ್ತು ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ 40 ಕ್ಕೂ ಹೆಚ್ಚು ಮಂದಿ ಜಿಲ್ಲಾ ಮುಖಂಡರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Related Articles

Back to top button