Belagavi NewsBelgaum NewsKannada NewsKarnataka NewsPolitics

*ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ವಿವಿಧ ಆಡಳಿತಾತ್ಮಕ ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು.

ಸಭೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ ಯಾವುದಾದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾದಲ್ಲಿ, ತಕ್ಷಣ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಂತೆ ಸೂಚನೆ ನೀಡಲಾಯಿತು. 

ಟ್ಯಾಂಕರ್‌ಗಳಿಲ್ಲದ ಗ್ರಾಮ ಪಂಚಾಯಿತಿಗಳು ಅವುಗಳನ್ನು ಖರೀದಿಸುವಂತೆ ತಿಳಿಸಲಾಯಿತು. ಏಪ್ರಿಲ್ ನಂತರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಹಿಪ್ಪರಗಿ ಬ್ಯಾರೇಜ್‌ನ 22ನೇ ಕ್ರಸ್ಟ್ ಗೇಟ್ ಮುರಿದು ಸುಮಾರು 2-3 ಟಿಎಂಸಿ ನೀರು ನಷ್ಟವಾಗಿರುವ ಹಿನ್ನೆಲೆ, ಮಹಾರಾಷ್ಟ್ರ ಸರ್ಕಾರದಿಂದ ಸುಮಾರು 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡುವ ಕುರಿತು ಚಿಂತನೆ ನಡೆದಿದೆ.

Home add -Advt

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಸುಮಾರು 85% ಪೂರ್ಣಗೊಂಡಿದ್ದು, ಅದನ್ನು 92% ಗುರಿಗೆ ತಲುಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಮತದಾರರ ಕುರಿತಾದ ಆರೋಪಗಳ ಬಗ್ಗೆ ಮುಂದಿನ ವಾರ ಮತ್ತೊಂದು ಸಭೆ ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ನೂತನ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ, ಅವುಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್, ಜಿಪಂ ಸಿಇಓ ರಾಹುಲ್ ಸಿಂಧೆ, ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button