*ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಚಿವ ಸತೀಶ ಜಾರಕಿಹೊಳಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಹನಿ ನೀರಾವರಿ, ಏತ ನೀರಾವರಿ, ಕೆರೆ ತುಂಬುವ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳಿಸಬೇಕು. ನೆನೆಗುದಿಗೆ ಬಿದ್ದಿರುವ ನೀರಾವರಿ ಇಲಾಖೆಯ ವಿವಿಧ ಕಾಮಗಾರಿಗಳನ್ನು ನಿಗದಿತ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಜು.8) ಜರುಗಿದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಡಿ ಬರುವ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ದುರಸ್ತಿಗೊಳಪಟ್ಟ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ಕೆರೆ ತುಂಬಿಸುವ ಯೋಜನೆಯಡಿ ನೀರು ಪೋಲಾಗದಂತೆ ಕಾರ್ಯನಿರ್ವಹಿಸಬೇಕು. ನೀರಾವರಿ ಯೋಜನೆಗಳಿಗಾಗಿ ಅಗತ್ಯವಿರುವ ಭೂ ಸ್ವಾಧೀನ ಕಾರ್ಯವನ್ನು ಕೈಗೊಂಡು ಪರಿಹಾರ ವಿತರಣೆ ಮಾಡಬೇಕು. ಪರಿಹಾರ ವಿತರಣೆ ಕಾರ್ಯದಲ್ಲಿ ವಿಳಂಭವಾಗದಂತೆ ನಿಗಾವಹಿಸಬೇಕು.
ಕ್ರಿಯಾ ಯೋಜನೆಯನ್ವಯ ಅನುಮೋದನೆಗೊಂಡಂತಹ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳನ್ನು ಅಪೂರ್ಣಗೊಳಿಸದೇ ಕೈಗೊಳ್ಳಲಾದ ಕಾಮಗಾರಿಗಳ ಮೇಲುಸ್ತುವಾರಿ ಸಮರ್ಪಕವಾಗಿ ಆಗಬೇಕು ಎಂದು ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಮುಖ್ಯ ಇಂಜಿನಿಯರ್ ಮಾತನಾಡಿ ಸದ್ಯ ನೀರಾವರಿ ಇಲಾಖೆಯಲ್ಲಿ 712 ಹುದ್ದೆಗಳು ಖಾಲಿ ಇರುತ್ತವೆ. ಜಿಲ್ಲೆಯಲ್ಲಿ 31 ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಇದರಲ್ಲಿ 4 ಹನಿ ನೀರಾವರಿ, 7 ಮುಂದುವರೆದ ಏತ ನೀರಾವರಿ ಯೋಜನೆ, 6 ಹೊಸ ಏತ ನೀರಾವರಿ ಯೋಜನೆ, 8 ಕೆರೆ ತುಂಬಿಸುವ ಯೋಜನೆಗಳು, 6 ಇತರೆ ಯೋಜನೆಗಳು ಪ್ರಗತಿಯಲ್ಲಿರುತ್ತವೆ.
ಸಭೆಯಲ್ಲಿ ಶಾಸಕರಾದ ಧುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.