Latest

ವೈದ್ಯರು, ನರ್ಸ್ ಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್​ಗಳಾದ ವೈದ್ಯರು, ನರ್ಸ್​ಗಳಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಆಯುಷ್ ಮತ್ತು ಯುನಾನಿ ವೈದ್ಯರ ತಿಂಗಳ ಸಂಬಳವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದು, ಆಯುಷ್, ಯುನಾನಿ ವೈದ್ಯರಿಗೆ ನೀಡಲಾಗುವ ವೇತನವನ್ನು 25ರಿಂದ 48 ಸಾವಿರಕ್ಕೇ ಏರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ‌ ಕೋವಿಡ್ ಕಾರ್ಯ ನಿರ್ವಹಣೆಗೆ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್​ ವೈದ್ಯರಿಗೂ ವೇತನ ಹೆಚ್ಚಿಸಲಾಗುವುದು. 6 ತಿಂಗಳ ಕಾಲ ನರ್ಸ್​ಗಳ ವೇತನವನ್ನು 30 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ ಎಂದರು.

ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲ ನರ್ಸ್​ಗಳಿಗೂ ಈ ಹೊಸ ವೇತನ ಅನ್ವಯವಾಗಲಿದೆ. ಇದುವರೆಗೂ 15 ಸಾವಿರ ರೂ. ವೇತನ ಪಡೆಯುತ್ತಿದ್ದ ನರ್ಸ್ ಗಳು ಇನ್ನುಮುಂದೆ 30 ಸಾವಿರ ರೂ. ವೇತನ ಪಡೆಯಲಿದ್ದಾರೆ. ಆದರೆ ಇದು ಕೇವಲ 6 ತಿಂಗಳು ಮಾತ್ರ ಅನ್ವಯವಾಗಲಿದೆ ಎಂದು ಹೇಳಿದರು.

ಇನ್ನು ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎನ್‌ಡಿಆರ್‌ಎಫ್, ಕೆಪಿಎಂಇ, ಎಪಿಡಮಿಕ್ ಆ್ಯಕ್ಟ್ ಇದೆ. ಆ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಸಂಘರ್ಷದ ಹಾದಿ ಬೇಡ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಿಎಂ ಯಡಿಯೂರಪ್ಪ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Home add -Advt

Related Articles

Back to top button