Kannada NewsLatest

ರೈಲ್ವೆ ಕಾಮಗಾರಿಗಳಿಗೆ ವೇಗ -ಸಚಿವ ಸುರೇಶ ಅಂಗಡಿ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಪ್ರಧಾನಿ ನರೇಂದ್ರ ಮೋದಿ ಎಲ್ಲ ಕೇಂದ್ರ ಸಚಿವ ಹಾಗೂ ಸಂಸದರಿಗೆ ಭಾಷಣ ಕಡಿಮೆ ಕೆಲಸ ಹೆಚ್ಚು ಮಾಡಿ ಎಂದು ಸೂಚನೆ ನೀಡಿದ್ದಾರೆ. ಆದ್ದರಿಂದ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ಶಕ್ತಿ ಮೀರಿ ನನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಹೇಳಿದರು.

ಶನಿವಾರ ನಗರದ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಆಶೀರ್ವಾದ ಪಡೆದು ಮಾತನಾಡಿದರು.

 ನಾಲ್ಕನೇ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹುಕ್ಕೇರಿ ಶ್ರೀಗಳು ಕೇಂದ್ರ ಸಚಿವರಾಗಿ ಬನ್ನಿ ಎಂದು ಆಶೀರ್ವಾದ ಮಾಡಿದ್ದರು. ಅದು ನಿಜವಾಗಿದೆ ಎಂದರು.

ರಾಜ್ಯದಲ್ಲಿ ಸಾಕಷ್ಟು ಹಳೆ ರೈಲ್ವೆ ಕಾಮಗಾರಿಗಳಿಗೆ ವೇಗ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಿ ೪೦. ವರ್ಷದ ಜನರ ಬೇಡಿಕೆ ಏನು ಎಂದು ತಿಳಿದುಕೊಂಡು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು.  ಜನರು ರೈಲ್ವೆ ಇಲಾಖೆಯಲ್ಲಿ ಯಾವ ಬದಲಾವಣೆ ಹಾಗೂ ಹೊಸ ಹೊಸ ಯೋಜನೆಯ ಬಗ್ಗೆ ತಮಗೆ ಮಾಹಿತಿ ನೀಡಿದರೇ ಅದನ್ನು ತತ್ವರಿತ ರೀತಿಯಲ್ಲಿ ಬಗೆ ಹರಿಸಲು ಶ್ರಮಿಸುತ್ತೇನೆ ಎಂದು ಭವರವಸೆ ನೀಡಿದರು.

ನಗರದಲ್ಲಿ ಅನೇಕ ಸಮಸ್ಯೆಗಳಿವೆ. ರಾಜ್ಯ ಸರಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬೆಳಗಾವಿ ಸ್ಮಾರ್ಟ್ ಸಿಟಿ, ಬೆಳಗಾವಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸುವುದು ಹಾಗೂ ಬಾಕಿ ಉಳಿದ ಮೆಲ್ಸೇತುವೆಯ ಕಾಮಗಾರಿಗಳನ್ನು ವೇಗವಾಗಿ ಪ್ರಾರಂಭಿಸಲು ಶ್ರಮಿಸಿ ಬೆಳಗಾವಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸುವೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ೨೧ ವರ್ಷಗಳ ಬಳಿಕ ಬೆಳಗಾವಿ ಲೋಕಸಭಾ ಸಂಸದ ಸುರೇಶ ಅಂಗಡಿ ಅವರಿಗೆ ಕೇಂದ್ರ ಸಚಿವ ಸ್ಥಾನ ದೊರಕಿದ್ದು ಹೆಮ್ಮೆಯ ಸಂಗತಿ. ಅವರಿಗೆ ಕೇಂದ್ರ ಸಚಿವ ಸ್ಥಾನ ಬಹಳ ದಿನಗಳ ಹಿಂದೆಯೇ ಸಿಗಬೇಕಿತ್ತು. ಈಗ ನರೇಂದ್ರ ಮೋದಿ ಅವರು ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ ಅಂಗಡಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಶ್ಲಾಘನೀಯ ಎಂದರು.

ಸುರೇಶ ಅಂಗಡಿ ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಇಡೀ ರಾಜ್ಯ ದೇಶ ಅಭಿವೃದ್ಧಿ ಮಾಡುವುದರ ಜತೆ ನಮ್ಮ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಉತ್ತರ ಕರ್ನಾಟಕದ ಸಮಸ್ಯೆಯನ್ನ ಪರಿಹಾರಿಸಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಬಿಜೆಪಿ ಮುಖಂಡ ಎಂ.ಬಿ.ಜೀರಲಿ, ಎಂ.ಎಂ. ಕುಲಕರ್ಣಿ, ಅರವಿಂದ ಜೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button