*ಮಕ್ಕಳಿಗೆ ಬೈಯ್ಯುವ ಮುನ್ನ ಇರಲಿ ಎಚ್ಚರ! ಶಿರಸಿಯಿಂದ ಮನೆ ಬಿಟ್ಟು ಹೋದ ಮಕ್ಕಳು ಮುಂಬೈನಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಅಪ್ಪ-ಅಮ್ಮ ಬೈದರು ಎಂಬ ಕಾರಣಕ್ಕೆ ಮನೆ ಬಿಟ್ತು ಹೋಗಿದ್ದ ಇಬ್ಬರು ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರು ಬೈದರು, ಚನ್ನಾಗಿ ಓದಿ ಎಂದು ಒತ್ತಡ ಹಾಕಿ ಹಿಂಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಮನನೊಂದು ಮನೆ ಬಿಟ್ಟು ಹೋಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದ ಇಬ್ಬರು ಮಕ್ಕಳು ಎರದು ದಿನಗಳಿಂದ ನಾಪತ್ತೆಯಾಗಿದ್ದರು.
ಶ್ರೀಶಾ (13) ಪರಿಧಿ (10) ಮನೆ ಬಿಟ್ಟು ಹೋಗಿದ್ದ ಮಕ್ಕಳು. ಆಗಸ್ಟ್ 16ರಿಂದ ಮಕ್ಕಳು ನಾಪತ್ತೆಯಾಗಿದ್ದರು. ಗಬರಿಯಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಶಿರಸಿಯಿಂದ ಹುಬ್ಬಳ್ಳಿಗೆ ತೆರಳಿದ್ದ ಇಬ್ಬರು ಮಕ್ಕಳು ಅಲ್ಲಿಂದ ಬಸ್ ನಲ್ಲಿ ಪುಣೆಗೆ ಹೋಗಿದ್ದಾರೆ. ಅಲ್ಲಿಂದ ಮುಂಬೈ ತೆರಳಿದ್ದಾರೆ. ಮಕ್ಕಳು ಬಸ್ ಗಳಲ್ಲಿ ಪ್ರಯಾಣಿಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಮುಂಬೈನಲ್ಲಿ ಇಳಿದ ಮಕ್ಕಳು ಶಿರಡಿಗೆ ಹೋಗಬೇಕು ಎಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆಗಾಗಲೇ ಶಿರಸಿ ಪೊಲೀಸರು ಸಿಸಿಕ್ಯಾಮರಾ ಆಧಾರದ ಮೇಲೆ ಮುಂಬೈ ಪೊಲೀಸರಿಗೆ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಬಳಿ ಹಣ ಕೇಳುತ್ತಿದ್ದ ಮಕ್ಕಳನ್ನು ಪೊಲೀಸರು ಠಾಣೆಗೆ ಕರೆತಂದು ಯಾವ ಊರಿಂದ ಬಂದಿದ್ದೀರಿ ಎಂದು ವಿಚಾರಿಸಿದ್ದಾರೆ. ಆಗ ಮಕ್ಕಳು ಶಿರಸಿಯಿಂದ ಬಂದಿದ್ದಾಗಿ ಬಾಯ್ಬಿಟ್ಟಿದ್ದಾರೆ. ಸದ್ಯ ಮುಂಬೈ ಪೊಲೀಸರು ಶಿರಸಿ ಪೊಲೀಸರಿಗೆ ಮಕ್ಕಳು ಪತ್ತೆಯಾಗಿದ್ದಾಗಿ ಮಾಹಿತಿ ನೀಡಿದ್ದು, ಮಕ್ಕಳನ್ನು ಶಿರಸಿಗೆ ಕರೆತರಲಾಗುತ್ತಿದೆ.