ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಚೆಕ್ ತರುತ್ತೇವೆಂದು ಹೋದ ಅಧಿಕಾರಿಗಳು ಎಲ್ಲಿಗೆ ಹೋದರು? ಪ್ರವಾಹದಲ್ಲಿ ಕಳೆದುಹೋದರೇ ಅಥವಾ ಉಪಚುನಾವಣೆ ಗದ್ದಲದಲ್ಲಿ ಮುಳುಗಿಹೋದರೇ? – ಇದು ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮಸ್ಥರ ಆತಂಕದ ಪ್ರಶ್ನೆ.
ಇತ್ತೀಚಿನ ಪ್ರವಾಹದಲ್ಲಿ ಯಡೂರವಾಡಿ ಸಂಪೂರ್ಣ ಮುಳುಗಿಹೋಗಿತ್ತು. ಇಲ್ಲಿನ ಪ್ರವಾಹ ಸಂತ್ರಸ್ತ ಕುಟುಂಬಗಳ ಸಮೀಕ್ಷೆ ಮಾಡಿದ ಅಧಿಕಾರಿಗಳು, 370 ಜನ ಬಿಪಿಎಲ್ ಕುಟುಂಬದವರಿಗೆ ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದರು. ಅದರಂತ 300 ಕುಟುಂಬಗಳಿಗೆ ಚೆಕ್ ವಿತರಿಸಿದರು.
ಉಳಿದ 70 ಕುಟುಂಬಗಳಿಗೆ ಚೆಕ್ ನೀಡಲಾಗುವುದು. ಚೆಕ್ ತೆಗೆದುಕೊಂಡು ಬರುತ್ತೇವೆ ಎಂದು ಹೇಳಿ ಹೋಗಿ 15 ದಿನದ ಮೇಲಾಯಿತು. ಈಗ ಯಾರನ್ನು ಸಂಪರ್ಕಿಸಿದರೂ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಹಾಗಾಗಿ 70 ಬಿಪಿಎಲ್ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇವರಿಗೆ ಒಂದು ಪೈಸೆ ಕೂಡ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ತ ದಯಾನಂದ ಪಾಟೀಲ ಪ್ರಗತಿವಾಹಿನಿಯೊಂದಿಗೆ ಮಾತನಾಡುತ್ತ ಅಳಲು ತೋಡಿಕೊಂಡರು.
ಸರಕಾರ ಎಲ್ಲ ಸಂತ್ರಸ್ತರಿಗೂ ತಾತ್ಕಾಲಿಕ ಪರಿಹಾರ ನೀಡಲಾಗಿದೆ ಎಂದು ಹೇಳುತ್ತಿದೆ. ಅಧಿಕಾರಿಗಳು ಹಾಗೆಯೇ ಹೇಳುತ್ತಿದ್ದಾರೆ. ಆದರೆ ಅರ್ಧ ಜನರಿಗೆ ಕೊಟ್ಟು ಉಳಿದವರನ್ನು ಬಿಟ್ಟಿದ್ದೇಕೆ? ಕೇಳಿದರೂ ಸರಿಯಾಗಿ ಸ್ಪಂದಿಸದಿರುವುದೇಕೆ ಎನ್ನುವುದು ಅವರ ಪ್ರಶ್ನೆ.
ಚೆಕ್ ಸಿಗದ ಗ್ರಾಮಸ್ಥರು ಅನೇಕ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಸ್ಥಳೀಯ ರಾಜಕೀಯ ಮುಖಡರನ್ನು ಪ್ರಶ್ನಿಸಿದ್ದಾರೆ. ಆದರೆ ಯಾರಿಗೂ ಸಮರ್ಪಕ ಉತ್ತರ ಮಾತ್ರ ಸಿಗುತ್ತಿಲ್ಲ. ಯಾವ ಕಾರಣದಿಂದ 70 ಜನರಿಗೆ ಚೆಕ್ ನೀಡಲಾಗಿಲ್ಲ? ನಿಜವಾಗಿಯೂ ಚೆಕ್ ತಯಾರಾಗಿರಲಿಲ್ಲವೇ? ಉದ್ದೇಶಪೂರ್ವಕವಾಗಿಯೇ ಬಿಡಲಾಗಿದೆಯೇ? ಸರಿಯಾದ ಉತ್ತರವನ್ನಾದರೂ ನೀಡಿದರೆ ನಾವು ಮುಂದಿನ ನಿರ್ಧಾರ, ಹೋರಾಟದ ಬಗ್ಗೆ ಯೋಚಿಸಬಹುದು ಎನ್ನುತ್ತಾರೆ ಸಂತ್ರಸ್ತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ