ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ.
ಗಲಭೆಯಲ್ಲಿ ತನ್ನ ಮನೆ ಕಳೆದುಕೊಂಡಿರುವ ಅಖಂಡ ಶ್ರೀನಿವಾಸ್,ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ತನಿಖೆ ಮಾಡುತ್ತಿದ್ದಾರೆ. ಯಾರು ತಪ್ಪಿತಸ್ಥರೋ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.
ನನ್ನ ಮನೆಯನ್ನೇ ಸುಟ್ಟು ಹಾಕಿ ರಾಜಕೀಯ ಮಾಡುವ ಉದ್ದೇಶವಿಲ್ಲ. ಯಾವುದೇ ರಾಜಕಾರಣಿಯಾಗಲಿ, ಅದೆಷ್ಟೇ ಪ್ರಭಾವಿಯಾಗಲಿ ಮನೆ ಒಡೆಯುವ ಕೆಲಸ ಮಾಡಬಾರದು. ಅವರಿಗೆ ನಾನೇನು ಮಾಡಿದ್ದೇನೆ? ನನಗೆ ಯಾರ ಮೇಲೂ ಅನುಮಾನವಿಲ್ಲ. ಎಲ್ಲರನ್ನೂ ಅಣ್ಣತಮ್ಮಂದಿರ ರೀತಿ ನೋಡಿದ್ದೇನೆ. ರಾಜಕಾರಣದಲ್ಲಿ ನನ್ನ ಮನೆ ಏನು ಮಾಡಿತ್ತು? ತಪ್ಪಿತಸ್ಥರು ಅದೆಷ್ಟೇ ಪ್ರಭಾವಿಯಾಗಿರಲಿ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಗಲಭೆಯಲ್ಲಿ ಧ್ವಂಸಗೊಂಡ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ತಮಿಳುನಾಡು ಸಂಸದ ವೇಲುಸ್ವಾಮಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದು ತುಂಬ ಆಶ್ಚರ್ಯಕರ ಸಂಗತಿ. ತಮಿಳುನಾಡಿನಲ್ಲಿ ಶಾಸಕರ ಮನೆ ಮೇಲೆ ಇಂತಹ ದಾಳಿ ಈ ವರೆಗೆ ನಡೆದಿಲ್ಲ. ಕರ್ನಾಟಕದಲ್ಲಿ ಇಂತಹ ಘಟನೆ ಅಚ್ಚರಿ ತಂದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ತಡೆಯಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ