ದಿನವಿಡೀ ನ್ಯಾಯಾಲಯದಲ್ಲಿ ಕಾದ ಶಾಸಕ ಮತ್ತು ಮಾಜಿ, ಹಾಲಿ ಸಚಿವರು ! ಜನಾರ್ಧನ ರೆಡ್ಡಿ, ಆನಂದ್ ಸಿಂಗ್, ನಾಗೇಂದ್ರಗೆ ಜಾಮೀನು
ಪ್ರಗತಿ ವಾಹಿನಿ ಸುದ್ದಿ ಅಂಕೋಲಾ – ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬೇಲೆಕೇರಿಯಲ್ಲಿ ೨೦೦೯-೧೦ನೇ ಸಾಲಿನಲ್ಲಿ ನಡೆದ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್, ಶಾಸಕ ನಾಗೇಂದ್ರ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅವರಿಗೆ ಸೋಮವಾರ ಅಂಕೋಲಾ ಜೆಎಂಎಪ್ ಸಿ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ಸಿಂಗ್ ಅವರ ಮಾಲಿಕತ್ವದ ವೈಷ್ಣವಿ ಮಿನರಲ್ಸ್ ಸೇರಿದಂತೆ ಹಲವು ಅದಿರು ಕಂಪನಿಗಳು ಭಾರಿ ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ತನಿಖೆ ನಡೆಸಿದೆ.
ಆನಂದ್ ಸಿಂಗ್ , ಜನಾರ್ಧನ ರೆಡ್ಡಿ, ನಾಗೇಂದ್ರ ಸೇರಿದಂತೆ ಹಲವರ ಮೇಲೆ ಚೆನ್ನೈ ಸಿಬಿಐ ತಂಡ ಪ್ರಕರಣ ದಾಖಲು ಮಾಡಿ ಮೊದಲು ಚೆನ್ನೈನಲ್ಲಿ ವಿಚಾರಣೆ ಕೈಗೊಳ್ಳಲಾಗಿತ್ತು. ಬಳಿಕ ಪ್ರಕರಣ ಅಂಕೋಲಾ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅಂಕೋಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳು ಅಂಕೋಲಾಕ್ಕೆ ಆಗಮಿಸಿ ನ್ಯಾಯಾಲಯದ ಎದುರು ಹಾಜರಾಗಿ ಜಾಮೀನು ಕೋರಿದ್ದರು. ಸೋಮವಾರ ದಿನವಿಡೀ ಜಾಮೀನಿಗಾಗಿ ಸಚಿವ ಆನಂದ್ ಸಿಂಗ್ ಜನಾರ್ಧನ ರೆಡ್ಡಿ, ಶಾಸಕ ನಾಗೇಂದ್ರ ಮತ್ತು ಇತರರು ಅಂಕೋಲಾದ ನ್ಯಾಯಾಲಯದಲ್ಲಿ ಹಾಜರಿದ್ದರು. ೧೧ ಜನರಲ್ಲಿ ೭ ಜನರಿಗೆ ಮಾತ್ರ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯ ಜಾಮೀನು ನೀಡಿದೆ.
ಹಿರಿಯ ವಕೀಲರಾದ ನಾಗರಾಜ ನಾಯಕ ಮತ್ತು ವಿನೋದ ಶ್ಯಾನಭಾಗ ಆರೋಪಿಗಳ ಪರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪಂಚ ರಾಜ್ಯ ಎಕ್ಸಿಟ್ ಪೋಲ್ ಏನು ಹೇಳುತ್ತೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ