Kannada NewsKarnataka NewsLatest

ಸ್ವತಃ ಸಂತ್ರಸ್ತರ ಮನವಿ ಪತ್ರ ಓದಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೋಕಾಕ ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಎ ಮತ್ತು ಬಿ ಕೆಟಗರಿ ಮನೆಗಳ ನಿರ್ಮಾಣಕ್ಕೆ ಪರಿಹಾರ ನೀಡುವುದರ ಜತೆಗೆ ಸಿ ಕೆಟಗರಿಯ ಎಷ್ಟೇ ಮನೆಗಳಿದ್ದರೂ ಇತರೆ ವಸತಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಜಿಲ್ಲೆಯ ಪ್ರವಾಹ ಬಾಧಿತ ಗ್ರಾಮಗಳಿಗೆ ಸೋಮವಾರ(ನ.೪) ಭೇಟಿ ನೀಡಿದ ಅವರು, ಗೋಕಾಕ ತಾಲ್ಲೂಕಿನ ಲೋಳಸೂರ ಗ್ರಾಮದಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎರಡೂ ಕ್ಷೇತ್ರಗಳಲ್ಲಿ ಎಷ್ಟೇ ಮನೆಗಳು ಹಾನಿಯಾಗಿದ್ದರೂ  ಸರ್ಕಾರದಿಂದ ಐದು ಲಕ್ಷ ರೂಪಾಯಿ ನೆರವಿನ ಮೂಲಕ ಎಲ್ಲ ಮನೆಗಳನ್ನು ನಿರ್ಮಿಸಿಕೊಡಲಾಗುವುದು.
ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೂರು ದಿನಗಳಲ್ಲಿ ಮರು ಪರಿಶೀಲನೆ ಕೈಗೊಳ್ಳಬೇಕು. ಶಾಸಕರು ನೀಡುವ ಮನವಿಪತ್ರವನ್ನು ಹಾಗೂ ಪಟ್ಟಿಯನ್ನು ಆಧರಿಸಿ ‘ಸಿ’ ಕೆಟಗರಿಯಲ್ಲಿರುವ ಮನೆಗಳ ಸಮಗ್ರ ಮಾಹಿತಿ ನೀಡಿದರೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ತಕ್ಷಣವೇ ಮಂಜೂರು ಮಾಡಲಾಗುವುದು ಎಂದರು.
ನಾಳೆಯಿಂದಲೇ ಶಾಸಕರಿಂದ ಪತ್ರವನ್ನು ಪಡೆದುಕೊಂಡು ತಮಗೆ ಕಳಿಸಿಕೊಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಈ ಪಟ್ಟಿ ಬಂದ ತಕ್ಷಣವೇ ಇತರೆ ವಸತಿ ಯೋಜನೆಯಡಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಅದೇ ರೀತಿ ಯಾವುದಾದರೂ ಕುಟುಂಬವು ಸೌಲಭ್ಯದಿಂದ ವಂಚಿತಗೊಂಡಿದ್ದರೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಟೆಗರಿ ವಿಂಗಡಣೆ ಸರಿಯಾಗಿಲ್ಲ 

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಎಫ್. ಅಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು, ಲೋಳಸೂರ ಗ್ರಾಮ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಎ, ಬಿ ಮತ್ತು ಸಿ‌ ಕೆಟಗರಿ ವಿಂಗಡಣೆ ಸಮರ್ಪಕವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಆದ್ದರಿಂದ ಇಂತಹ ಆರೋಪ ಇರುವ ಕಡೆಗಳಲ್ಲಿ ಮರು ಪರಿಶೀಲನೆ ನಡೆಸಬೇಕು ಎಂದರು.
ಘಟಪ್ರಭಾ ಮತಕ್ಷೇತ್ರದ ವ್ಯಾಪ್ತಿಯ ಅನೇಕ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಆದ್ದರಿಂದ ಸಿ ಕೆಟಗರಿ ಅಡಿಯಲ್ಲಿ ಗುರುತಿಸಿರುವ ಮನೆಗಳಿಗೆ ಬಸವ ವಸತಿ ಯೋಜನೆಯಡಿ ಹೊಸದಾಗಿ ೨೦೦೦ ಮನೆಗಳನ್ನು ಒದಗಿಸಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಈ ಕುರಿತು ಗ್ರಾಮಸ್ಥರ ಸಿದ್ಧಪಡಿಸಿದ್ದ ಮನವಿಪತ್ರವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ವತಃ ಓದಿ ಸಚಿವ ಸೋಮಣ್ಣ ಅವರಿಗೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button