Kannada NewsKarnataka News

ಸಂಕಷ್ಟಕ್ಕೆ ಸ್ಪಂದಿಸಿ ರೋಗಿಗಳ ಕಣ್ಣೀರು ಒರೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಲಕ್ಷ್ಮಿ ಹೆಬ್ಬಾಳಕರ್ ಕೇವಲ ಶಾಸಕರಲ್ಲ, ಅವರು ನಮ್ಮ ಪಾಲಿಗೆ ದೇವರಂತೆ ಬಂದಿದ್ದಾರೆ ಎಂದ ಸಂತ್ರಸ್ತರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ.​ ಆದರೆ ಅವು ಮನುಷ್ಯನನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಜರ್ಜರಿತರನ್ನಾಗಿಸುತ್ತವೆ. ಬಡವರಂತೂ ಸಣ್ಣ ಪುಟ್ಟ ಕಾಯಿಲೆ ಬಂದರೂ ಕಂಗೆಟ್ಟು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಯಾರಾದರೂ ನೆರವಿಗೆ ಬಂದರೆ ಅವರೇ ದೇವರಂತೆ ಕಾಣಿಸುತ್ತಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಈ ನಾಲ್ವರ ಪಾಲಿಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ದೇವರಂತೆ ಬಂದು ಆರ್ಥಿಕ ಸಹಾಯ ಒದಗಿಸಿದ್ದಾರೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್.
ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾದ ನಂತರ ಮನೆ ಮಗಳಾಗಿ ಕ್ಷೇತ್ರದ ಸಾವಿರಾರು ಜನರಿಗೆ ಕಷ್ಟದ ಸಮಯದಲ್ಲಿ ಸಹಾಯ ನೀಡುವ ಮೂಲಕ ಅವರ ಪಾಲಿನ ದೇವತೆಯಂತೆ ಕಾಣಿಸಿದ್ದಾರೆ. ಕೆಲವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸಿದ್ದರೆ, ಇನ್ನು ಕೆಲವರಿಗೆ ಸ್ವಂತ ಹಣವನ್ನೇ ನೀಡುವ ಮೂಲಕ ಕಣ್ಣೀರು ಒರೆಸಿದ್ದಾರೆ. ವಿರೋಧಿಗಳ ಅಡ್ಡಿ, ಸುಳ್ಳು ಆರೋಪಗಳ ನಡುವೆಯೂ ಹೆಬ್ಬಾಳಕರ್ ಅವರು ಅಭಿವೃದ್ಧಿ ಕೆಲಸ ಮತ್ತು ಜನಸ್ಪಂದನೆಯನ್ನು ಮಾತ್ರ ನಿಲ್ಲಿಸಿಲ್ಲ.
 ಇದೀಗ ಮತ್ತೆ ನಾಲ್ವರು ತೀವ್ರ ಖಾಯಿಲೆಯಿಂದಾಗಿ ಆಸ್ಪತ್ರೆ ವೆಚ್ಚ ಭರಿಸಲಾಗದ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೊಡಿಸಿದ್ದಾರೆ. ಗಣೇಶಪುರದ ಕೆ.ಸನ್ಮುಗಂ ಮಣಿ ಪೀಟರ್, ಸುಳೇಬಾವಿಯ ಕೌಸರ್ ಅಯೂಬ್ ಅತ್ತಾರ, ಅಂಬೆವಾಡಿಯ ಯಲ್ಲಪ್ಪ ನಾಗೇಂದ್ರ ಕೊಲತೆ ಮತ್ತು ಕುದ್ರೆಮನಿಯ ರಾಜೇಂದ್ರ ವಿಷ್ಣು ಪಾಟೀಲ ಇವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು. ಭಾರಿ ಪ್ರಮಾಣದಲ್ಲಿ ಆಸ್ಪತ್ರೆಯ ಬಿಲ್ ಬಂದಿದ್ದರಿಂದ ಕಂಗಾಲಾಗಿ ಹೋಗಿದ್ದರು.
ಇದೀಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿಗಳನ್ನು ಸ್ವತಃ ಭೇಟಿ ಮಾಡಿ ರೋಗಿಗಳ ಪರಿಸ್ಥಿತಿಯನ್ನು ವಿವರಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಲ್ವರಿಗೂ 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಹಣಕಾಸಿನ ನೆರವು ಮಂಜೂರಾಗಿದೆ. ಇದರಿಂದಾಗಿ ಅಷ್ಟರಮಟ್ಟಿಗೆ ರೋಗಿಗಳ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಆರ್ಥಿಕ ನೆರವು ಪಡೆದವರು, ಲಕ್ಷ್ಮಿ ಹೆಬ್ಬಾಳಕರ್ ಕೇವಲ ಶಾಸಕರಲ್ಲ, ಅವರು ನಮ್ಮ ಪಾಲಿಗೆ ದೇವರಂತೆ ಬಂದಿದ್ದಾರೆ ಎಂದು ಅಂತಃಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button