ಪ್ರಗತಿವಾಹಿನಿ ಸುದ್ದಿ, ಸವದತ್ತಿ-
ಪಂಚಮಸಾಲಿ ಹೋರಾಟ ವೇದಿಕೆಯಲ್ಲಿ ರಾಜಕೀಯ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಿಗ್ಗಾಮುಗ್ಗಾ ಉಗಿದರು.
ಪಂಚಮಸಾಲಿ ಮೀಸಲಾತಿ ಕೊಡಲು ನಾವು ಬದ್ಧರಿದ್ದೇವೆ. ಆದರೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ನಿಲುವೇನು ಎಂದು ಅರವಿಂದ ಬೆಲ್ಲದ ಪ್ರಶ್ನಿಸಿದರು.
ಇದಾದ ನಂತರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಇದು ಮಾಡು ಇಲ್ಲವೇ ಮಡಿ ಹೋರಾಟ. ಆದರೆ ಮಡಿಯುವುದಕ್ಕಿಂತ ಮೊದಲು ಮೀಸಲಾತಿ ಪಡಿ ಎಂದು ಸ್ವಾಮೀಜಿಗಳು ಕರೆ ಕೊಟ್ಟಿದ್ದಾರೆ. ಸ್ವಾಮೀಜಿಗಳು ಪಾದಯಾತ್ರೆ ಮಾಡಿದ್ದಾರೆ. ಅರವಿಂದ ಬೆಲ್ಲದ ಅವರೇ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದೀರೇನು? ಎಂದು ಪ್ರಶ್ನಿಸಿದರು.
ನಿಮ್ಮ ಕೈಯಲ್ಲಿ ಅಧಿಕಾರವಿದೆ. ನಿಮ್ಮ ಪಕ್ಷದ ಮುಖಂಡರ ನಿಲುವೇನು ಎಂದು ಸವಾಲು ಹಾಕ್ತೀರಾ? ನಾಳೆ ಬೆಳಗ್ಗೆಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಂದ ಸ್ಟೇಟ್ ಮೆಂಟ್ ಕೊಡಸ್ತೀನಿ. ನೀವು ನಾಳೆ ಸಂಜೆಯೇ ಮೀಸಲಾತಿ ಘೋಷಣೆ ಮಾಡ್ತೀರೇನು? ಎಂದು ಸವಾಲೆಸೆದರು.
ನೀವು ಗಟ್ಟಿ ಇದ್ದೀರೇನು? ರಾಜಕೀಯ ಮಾಡಬೇಡಿ ಎಂದರೂ ಮಾಡ್ತೀರೇನು? ಎಷ್ಟಂತ ಜೀವ ತಿಂತೀರಿ? ಅಧಿಕಾರದಲ್ಲಿದ್ದವರು ಎಷ್ಟು ಮರಗಸ್ತೀರಿ? ಎಷ್ಟು ಸಂಕಟ ಕೊಡ್ತೀರಿ? ಸ್ವಾಮೀಜಿಗಳು ಮತ್ತೆ ಪಾದಯಾತ್ರೆ ಮಾಡಿ ಅಂತೀರೇನು? ಎಂದು ಪ್ರಶ್ನಿಸಿದರು.
ನಾವು ರೈತಾಪಿ ವರ್ಗದವರು. ರೈತರನ್ನು ಕಡೆಗಣಿಸಿದವರು ಉದ್ದಾರವಾಗಲ್ಲ. ನಾವು ಯಾರದ್ದೂ ಕಸಿದು ಕೊಡಿ ಎಂದು ಕೇಳುತ್ತಿಲ್ಲ. ನಮಗೆ ಹೊಟ್ಟೆಗೆ ಕಡಿಮೆ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಕೇಳುತ್ತಿದ್ದೇವೆ. 90 ಪರ್ಸೆಂಟ್ ಪಡೆದರೂ ಉತ್ತಮ ಉದ್ಯೋಗ ಸಿಗುತ್ತಿಲ್ಲ. 3ನೇ ದರ್ಜೆಯ ಕ್ಲರ್ಕ್ ಆಗಲೂ ಪರದಾಡುವಂತಹ ಸ್ಥಿತಿ ಬಂದಿದೆ. ನಾವು ಒಗ್ಗಟ್ಟಾಗಿದ್ದೇವೆ. ಸಂಘಟಕರಾಗಿದ್ದೇವೆ. ನಮ್ಮ ಸ್ಥಾನ ಮಾನ ಮರ್ಯಾದೆ ನಮಗೂ ಸಿಗುತ್ತದೆ. ಹಾಗಾಗಿಯೇ ಈ ಹೋರಾಟದ ಕರೆ. ಮುಖ್ಯಮಂತ್ರಿಗಳೇ ನಮ್ಮ ಸಹನೆಯ ಕಟ್ಟೆ ಒಡೆಯುತ್ತಿದೆ. ನೀವು ಕರುಣಾಮಯಿ. ಮೃದು ಸ್ವಭಾವದವರು. ಆದರೆ ನಾನು ಹೇಳೇ ಇಲ್ಲ ಎಂದು ಹೇಳಿಕೆ ಕೊಡುವುದು ಎಷ್ಟು ಸರಿ? ರಾಜಕಾರಣ ಮುಖ್ಯ. ಆದರೆ ಅದಕ್ಕಿಂತ ಸಮಾಜ ಮುಖ್ಯ. ರಾಜಕಾರಣ ಒಂದು ಕಡೆ ಇಡೋಣ. ಪಂಚಮಸಾಲಿ ಮೀಸಲಾತಿ ತರೋಣ, ಈಗ ಮೀಸಲಾತಿ ಬರದಿದ್ದರೆ 10 ವರ್ಷಗಳಲ್ಲಿ ಕೆಟ್ಟ ಸ್ಥಿತಿ ಬರಲಿದೆ. ಎಲ್ಲರಿಗೂ ಮೀಸಲಾತಿ ಇದೆ. ನಮಗೆ ಇಲ್ಲ, ಎಂತಹ ಕರ್ಮ ಮಾಡಿ ಬಂದಿದ್ದೇವೆ, ಮೀಸಲಾತಿ ಸಿಗೋವರೆಗೆ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದರು.
ಕೆಲಸ ಆಗಿದೆ, ಡಿ. 22ರಂದು ಪಂಚಮಸಾಲಿಗಳಿಂದ ವಿಜಯೋತ್ಸವ – ಬಸನಗೌಡ ಪಾಟೀಲ ಯತ್ನಾಳ ಘೋಷಣೆ
https://pragati.taskdun.com/work-is-done-on-dec-22nd-victory-from-panchmasali-announcement-of-basanagowda-patil-yatna/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ