Kannada NewsKarnataka NewsLatest
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ವರ್ಷದ 365 ದಿನವೂ ಅಭಿವೃದ್ಧಿ ಯೋಜನೆಗಳು ನಿರಂತರವಾಗಿ ನಡೆಯುತ್ತವೆ. ಯಾವುದೇ ಕಾರಣದಿಂದ ಅಭಿವೃದ್ಧಿಗೆ ತಡೆಯಾಗುವುದಿಲ್ಲ. ಹಾಗೆಯೇ ನಾನೂ ಕೂಡ 365 ದಿನವೂ, ದಿನದ 24 ಗಂಟೆಯೂ ಜನರೊಂದಿಗೆ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿ, ಜನರ ಯೋಗಕ್ಷೇಮ ನೋಡಿಕೊಳ್ಳುವುದರ ಹೊರತುಪಡಿಸಿ ನನಗೆ ಬೇರೆ ಕೆಲಸ ಇಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ಭಾನುವಾರ ಎಡೆಬಿಡದೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಒಂದು ವಾರ ಬೆಂಗಳೂರಿನಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡು ಮರಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಇಡೀ ದಿನ ಕ್ಷೇತ್ರದಲ್ಲಿ ಸುತ್ತಾಡಿ ಅನೇಕ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.




ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಕೆರೆಯ ಸೌಂದರ್ಯೀಕರಣದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವುಗಳನ್ನು ಪರಿಶೀಲಿಸಿ, ಪ್ರಗತಿಯ ಮಾಹಿತಿ ಪಡೆದರು. ಜತೆಗೆ ಗ್ರಾಮಸ್ಥರು ಗಣೇಶ ವಿಸರ್ಜನೆಯ ಸಲುವಾಗಿ ಅನಾನುಕೂಲತೆಯನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಗಣೇಶ ವಿಸರ್ಜನೆಯ ಸಲುವಾಗಿ ಈಗಾಗಲೇ ಪ್ರತ್ಯೇಕ ಕೆರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆರೆಯ ಕಾಮಗಾರಿಗಳ ಬಗ್ಗೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದು ಹೆಬ್ಬಾಳಕರ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿಲ ಪಾವಸೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತಾ ಪಾಟೀಲ, ಜಯರಾಂ ಪಾಟೀಲ, ಅಡಿವೆಪ್ಪ ಹತ್ತರಗಿ, ಸದೆಪ್ಪ ರಾಜಕಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಅರ್ಚನಾ ಪಾಟೀಲ, ಸಿದ್ದರಾಯಿ ಬೆಳಗಾವಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕ್ಷೇತ್ರದ ಕಂಗ್ರಾಳಿ ಕೆ ಎಚ್ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಹಾಗೂ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ನೂತನ ಸ್ಮಾರ್ಟ್ ಕ್ಲಾಸ್ ಕಟ್ಟಡಗಳ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಾಳು ಪಾಟೀಲ, ಮನೋಹರ ಪಾಟೀಲ, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷೆ ಲತಾ ಪಾಟೀಲ, ವಿಶಾಲ ಭೋಸ್ಲೆ, ಜ್ಯೋತಿಬಾ ಪಾಟೀಲ, ವಿನಾಯಕ ಪಾಟೀಲ, ಶಾಲೆಯ ಸಿಬ್ಬಂದಿಯವರು ಮುಂತಾದವರು ಉಪಸ್ಥಿತರಿದ್ದರು.
ಡಾ.ಅಂಬೇಡ್ಕರ್ ಭವನ ಕಟ್ಟಡದ ಕಾಲಂ ಪೂಜೆ

