
ಪ್ರಗತಿವಾಹಿನಿ ಸುದ್ದಿ; ಮೈಸೂರು: ಜೆಡಿಎಸ್ ನಾಯಕರು ಹಾಗೂ ಸಂಸದೆ ಸುಮಲತಾ ನಡುವಿನ ಕೆ.ಆರ್.ಎಸ್. ಡ್ಯಾಂ ಕದನ ತಾರಕ್ಕೇರಿದ್ದು, ವಾಕ್ಸಮರ ಮುಂದುವರೆಸಿದ್ದಾರೆ. ಕೆ.ಆರ್.ಎಸ್ ನಲ್ಲಿ ಬಿರುಕು ಬಿಟ್ಟಿದೆ ಎಂಬ ಸುಮಲತಾ ಹೇಳಿಕೆ ಬೆನ್ನಲ್ಲೇ ಇದೀಗ ಅಧಿಕಾರಿಗಳ ತಂಡದೊಂದಿಗೆ ಖುದ್ದು ಪರಿಶೀಲನೆ ನಡೆಸಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಸುಮಲತಾ ದೇಶದ್ರೋಹಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಕೆ.ಆರ್.ಎಸ್ ನಲ್ಲಿ ಯಾವುದೇ ಬಿರುಕು ಇಲ್ಲ, ಸುರಕ್ಷಿತವಾಗಿದೆ. ಇಷ್ಟು ವರ್ಷದಿಂದ ನಮ್ಮ ಕಣ್ಣಿಗೆ ಕಾಣದ ಬಿರುಕು ಸುಮಲತಾಗೆ ಹೇಗೆ ಕಂಡಿತು ಎಂಬುದು ಗೊತ್ತಾಗುತ್ತಿಲ್ಲ. ಇಲ್ಲದ ಹೇಳಿಕೆ ಕೊಟ್ಟು ಸಂಸದರು ಆತಂಕಸೃಷ್ಟಿಸಿದ್ದಾರೆ. ನೈಸರ್ಗಿಕ ಸಂಪತ್ತಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಸಂಸದರು ನೀದಿದ ಹೇಳಿಕೆ ದೇಶದ್ರೋಹದಷ್ಟೇ ಅಪರಾಧ ಎಂದರು.
ಸುಮಲತಾ ಅವರದ್ದು ಎಷ್ಟು ನಟೋರಿಯಸ್ ಬಿಹೇವಿರ್ ಎಂಬುದು ಗೊತ್ತಾಗಿದೆ. ಕೆ.ಆರ್.ಎಸ್. ಡ್ಯಾಂ ಸೋರುತ್ತಿದ್ದರೆ ಸುಮಲತಾರನ್ನೆ ಅಡ್ಡಲಾಗಿ ನಿಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದು ಬೇರೆ ದಾಟಿಯಲ್ಲಿ ಅದನ್ನು ತಿರುಚಿ ಸುಮಲತಾ ತಮಗೆ ಬೇಕಾದಂತೆ ಹೇಳಿಕೆ ಬಳಸಿಕೊಳ್ಳುತ್ತಿದ್ದಾರೆ. ಮಹಿಳೆ ಬಗ್ಗೆ ಕೆಟ್ಟ ಪದಬಳಕೆ ಮಾಡಿದರು, ಮಾಜಿ ಸಿಎಂಗೆ ಪದಗಳ ಮೇಲೆ ಹಿಡಿತವಿಲ್ಲ. ಮಹಿಳೆಯರ ಬಗ್ಗೆ ಗೌರವವಿಲ್ಲ ಎಂಬ ನಾಟಕೀಯ ಹೇಳಿಕೆಗಳನ್ನು ನೀಡುತ್ತಾ ಅದನ್ನೆ ದೊಡ್ಡ ವಿಚಾರವಾಗಿ ಬಿಂಬಿಸಿ ಇಲ್ಲಿವರೆಗೆ ತಂದಿದ್ದಾರೆ. ಈಗ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ನಾನು ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಬಗ್ಗೆ ಪಾಸಿಟಿವ್ ಆಗಿ ಮಿಸೈಲ್ ಎಂಬ ಶಬ್ದ ಬಳಸಿದ್ದೆ. ಅದನ್ನು ಬೇರೆ ರೀತಿಯಲ್ಲಿ ಮಾತನ್ನು ತಿರುಗಿಸಿ, ತನಗೆ ಅನ್ವಯವಾಗುವಂತೆ ಹೇಳಿದ್ದಾರೆ ಎಂದು ಮಾಧ್ಯಮಗಳ ಮುಂದೆ ನಟನೆ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸುಮಲತಾ ಅವರ ಈ ಆಕ್ಟಿಂಗ್ ಗೆ ನಿಜಕ್ಕೂ ಅವಾರ್ಡ್ ಕೊಡಲೇಬೇಕು. ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೂ ಅವರಾಡುತ್ತಿರುವ ನಾಟಕ, ಮಾತುಗಳಿಂದಲೇ ಗೊತ್ತಾಗುತ್ತಿದೆ ಅವರೆಂತ ನಟೋರಿಯಸ್ ಎಂಬುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆದದ್ದು ಸುಮಲತಾ ಪತಿ ಅಂಬರೀಶ್ ಕಾಲದಲ್ಲಿ. ಈ ಬಗ್ಗೆ ಅವರಿಗೂ ಗೊತ್ತಿತ್ತು. ಸ್ವತ: ಬಂದು ಪರಿಶೀಲಿಸಿದ್ದರೂ ಸುಮ್ಮನಿದ್ದರು. ಈ ವಿಚಾರ ಸಾಕಷ್ಟು ಚರ್ಚೆಯೂ ಆಗಿತ್ತು. ಅದೇ ಗೊಂದಲದಿಂದಲೇ ಅಂಬರೀಶ್ ಎರಡು ಬಾರಿ ಸೋತರು. ಅಂಬರೀಶ್ ಬೆಂಬಲಿಗರೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು. ಅಷ್ಟೊಂದು ಮಾತನಾಡುವ ಸುಮಲತಾ ಈಗ ಪತಿ ಅಂಬರೀಶ್ ಕಾಲದಲ್ಲಿ ನಡೆದ ಅಕ್ರಮದ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.
ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರಿಬ್ಬರಿಗೆ ಪರಿಹಾರ ಮಂಜೂರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ