ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಿಯು ಪರೀಕ್ಷೆಗಳ ಫಲಿತಾಂಶವನ್ನು ಉತ್ತಮ ಪಡಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಜಂಟಿಯಾಗಿ ಹೊಸ ಸೂತ್ರ ಕಂಡುಹಿಡಿದಿದ್ದು ಶೀಘ್ರವೇ ಜಾರಿಗೊಳಿಸಲು ಮುಂದಾಗಿದ್ದಾರೆ.
ಈ ಕುರಿತು ಶಾಸಕದ್ವಯರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಬೆಳಗಾವಿ ಜಿಲ್ಲೆ 5ನೇ ಸ್ಥಾನದಲ್ಲಿದೆ. ಆದರೆ ಪಿಯು ಪರೀಕ್ಷೆಗಳಲ್ಲಿ 22ನೇ ಸ್ಥಾನಕ್ಕೆ ಇಳಿದಿದ್ದು ನಿರೀಕ್ಷಿತ ಫಲಿತಾಂಶ ಕಂಡುಬರುತ್ತಿಲ್ಲ. ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳಿಗೆ ಅಭ್ಯಾಸ ಸಾಮಗ್ರಿಗಳನ್ನು ಪೂರೈಸುವುದು ಹೊಸ ಸೂತ್ರದ ಪ್ರಮುಖ ಅಂಶವಾಗಿದೆ.
ಇದಕ್ಕಾಗಿ ವಿವಿಧ ಜಿಲ್ಲೆಗಳ ಸುಮಾರು 45 ಶೈಕ್ಷಣಿಕ ತಜ್ಞತೆ ಹೊಂದಿದ ಶಿಕ್ಷಕರು ರಚಿಸಿದ ಅಭ್ಯಾಸ ಸಾಮಗ್ರಿಗಳನ್ನು ಕ್ರೋಢೀಕರಿಸಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಸಾಕಷ್ಟು ಅಭ್ಯಾಸ ಸಾಮಗ್ರಿಗಳು ಲಭ್ಯ. ಆದರೆ ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಇವುಗಳ ಅಲಭ್ಯತೆ ಹೆಚ್ಚು ಪ್ರಮಾಣದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಈ ವಿಭಾಗಗಳ ವಿದ್ಯಾರ್ಥಿಗಳಿಗೂ ಕಲಿಕಾ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳಿಗೆ ಉಪಯುಕ್ತವೆನಿಸಲಿದೆ. ಪಿಯು ಪರೀಕ್ಷಾ ಮಂಡಳಿ ನಿಯಮಾವಳಿಗಳ ಚೌಕಟ್ಟಿನಲ್ಲೇ ಇವುಗಳನ್ನು ರಚಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಸದ್ಯ ಬೆಳಗಾವಿ ದಕ್ಷಿಣೋತ್ತರ ಕ್ಷೇತ್ರಗಳಲ್ಲಿರುವ 9600 ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಲಿದೆ. ಈ ಪೈಕಿ ಕಲಾ ವಿಭಾಗದಲ್ಲಿ 1666, ವಾಣಿಜ್ಯ ವಿಭಾಗದಲ್ಲಿ 3784 ಹಾಗೂ ವಿಜ್ಞಾನ ವಿಭಾಗದಲ್ಲಿ 3913 ವಿದ್ಯಾರ್ಥಿಗಳಿದ್ದಾರೆ.
ಟ್ಯೂಷನ್ ಗೆ ಮೂಗುದಾರ?:
ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಕಲಿಕೆ ಹೊರತಾಗಿ ಹೊರ ಭಾಗದಲ್ಲಿ ಖಾಸಗಿ ಟ್ಯೂಷನ್ ಪಡೆಯುವುದು ಬಹುತೇಕ ಸಾಮಾನ್ಯವಾಗಿದೆ. ಇದು ಪಾಲಕರ ಮೇಲಿನ ಶೈಕ್ಷಣಿಕ ಖರ್ಚಿನ ಹೊರೆಯನ್ನೂ ಹೆಚ್ಚಿಸುತ್ತಿದ್ದು ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಲೋಚಿಸಲಾಗುತ್ತಿದೆ. ಅದಕ್ಕೆ ಬದಲಾಗಿ ಕಾಲೇಜುಗಳಲ್ಲೇ ಕಲಿಕಾ ಗುಣಮಟ್ಟದ ವೃದ್ಧಿಗೆ ಹೊಸ ಉಪಕ್ರಮಗಳನ್ನು ತರುವುದು ಅನಿವಾರ್ಯ ಎಂದು ಅಭಯ ಪಾಟೀಲ ಹಾಗೂ ಅನಿಲ ಬೆನಕೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಪಾಟೀಲ, ಶ್ರೀರಂಗ ದೇಶಪಾಂಡೆ ಅಶುತೋಷ ಮತ್ತಿತರರಿದ್ದರು.
ಮತದಾರರ ಪಟ್ಟಿಯಿಂದ 27 ಲಕ್ಷ ಹೆಸರು ಡಿಲಿಟ್; ಸಹಿ ಹಾಕಿದ್ದು ಯಾರು? ಅಕ್ರಮ ಮಾಡಿಸಿದ್ದು ಯಾರು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ