
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕರು ಹಾಗೂ ನಗರಸಭೆ ಮಾಜಿ ಅಧ್ಯಕ್ಷರ ನಡುವಿನ ತಿಕ್ಕಾಟ ಅವರ ವೈಯಕ್ತಿಕ ಸಮಸ್ಯೆಯಾಗಿದೆ. ಹಿಂದಿನ ಅಧ್ಯಕ್ಷರನ್ನು ಅಧಿಕಾರದಿಂದ ಇಳಿಸಿದ ಮೇಲಾದರೂ ಶಾಸಕರು ಸಮಾಧಾನದಿಂದ ಇದ್ದಾರೋ ಇಲ್ಲವೋ ಎಂದು ಅವರೇ ಹೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.
ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಇಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೊಸ ಅಧ್ಯಕ್ಷರನ್ನೂ ಕೂಡ ಅಧಿಕಾರದಿಂದ ಇಳಿಸುತ್ತಾರೋ, ಮುಂದುವರೆಸುತ್ತಾರೋ ನೋಡಬೇಕು ಎಂದು ಪರೋಕ್ಷವಾಗಿ ಬಿಜೆಪಿ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಅವರ ಬಗ್ಗೆ ಸತೀಶ ವ್ಯಂಗ್ಯವಾಡಿದರು. ನಗರದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇದ್ದೆ ಇದೆ ಎಂದು ಪ್ರತಿಕ್ರಿಯಿಸಿದರು.

ಅಧಿಕಾರಿಗಳೊಂದಿಗೆ ಸಭೆ:
ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಕೆಲವು ವಿಷಯಗಳ ಕುರಿತು ಇಂದು ಸಭೆ ಮಾಡಿದ್ದೇವೆ. ಹಿಂದಿನ ಬಾರಿ ನಾವು ಕೆಲವು ಮಾಹಿತಿಗಳನ್ನು ಕೇಳಿದ್ದೆವು. ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ, ಅಧಿಕೃತವಾಗಿ ಲೇಔಟ್ ಮಾಡಿ ಮನೆ ನಿರ್ಮಿಸಿಕೊಡುವುದು ಸೇರಿ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ ಎಂದು ಹೇಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಮ್ ನಸಲಾಪುರೆ ಸೇರಿ ಇನ್ನಿತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ