Kannada NewsKarnataka NewsLatest

ಬೆಳಗಾವಿ-ಧಾರವಾಡ ರೈಲುಮಾರ್ಗ, 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮೋದಿ ಶಂಕುಸ್ಥಾಪನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿಲ್ಲೆಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಹಬ್ಬವಾಗಬೇಕು. ಕಾರ್ಯಕ್ರಮದ ಯಶಸ್ವಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡರು.
ಫೆ.27 ರಂದು ಕಾರ್ಯಕ್ರಮ ನಡೆಯಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಪೂರ್ವಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಕೃಷಿ ಸಮ್ಮಾನ ಯೋಜನೆಯ ನಿಧಿ ವರ್ಗಾವಣೆ, ರೈಲ್ವೆ ಅಭಿವೃದ್ಧಿ ಯೋಜನೆಗಳು ಹಾಗೂ ಜಲಜೀವನ ಮಿಷನ್ ಯೋಜನೆಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯುತ್ತಿದ್ದು, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂಭ್ರಮದಿಂದ ಭಾಗವಹಿಸಬೇಕು ಎಂದು ಸಚಿವರು ಕರೆ ನೀಡಿದರು.
ಜಿಲ್ಲೆಯಲ್ಲಿ 1132 ಕೋಟಿ ವೆಚ್ಚದ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ರೀತಿ ಬೆಳಗಾವಿ-ಧಾರವಾಡ ರೈಲುಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13 ನೇ ಕಂತಿನ ನಿಧಿಯನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ.
ಕಾರ್ಯಕ್ರಮದ ಸ್ಥೂಲ ಮಾಹಿತಿಯನ್ನು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಮುಂಚಿತವಾಗಿಯೇ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕು.
ಪ್ರಧಾನಮಂತ್ರಿಗಳ ಸನ್ಮಾನ ಹಾಗೂ ಸ್ಮರಣಿಕೆ ನೀಡುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.
ಈ ಭಾಗದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ಸ್ಮರಣಿಕೆ ನೀಡಬೇಕು ಎಂದರು.
ಸಮರ್ಪಕ ಸಾರಿಗೆ ವ್ಯವಸ್ಥೆ:
ಸಂಬಂಧಿಸಿದ ಯೋಜನೆಯ ಫಲಾನುಭವಿಗಳನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಕಾರ್ಯಕ್ರಮಕ್ಕೆ ಕರೆತರಲು ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಒದಗಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ತಿಳಿಸಿದರು.
ಊಟ, ನೀರು ಮತ್ತು ಮಜ್ಜಿಗೆಯನ್ನು ಸಮರ್ಪಕವಾಗಿ ವಿತರಿಸಲು ತಂಡಗಳನ್ನು ನಿಯೋಜಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ವೇದಿಕೆ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಗ್ರೀನ್ ರೂಮ್, ತಾತ್ಕಾಲಿಕ ರಸ್ತೆ, ಊಟದ ವ್ಯವಸ್ಥೆಯ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ವಿವಿಧ ಸಮಿತಿ ರಚನೆ:
ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಮಾಲಿನಿ ಸಿಟಿ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ರಸ್ತೆ ದುರಸ್ತಿ, ಸೌಂದರ್ಯೀಕರಣ ಕೆಲಸ ನಡೆದಿದೆ. ಕನಿಷ್ಟ ಒಂದು ಲಕ್ಷ ಜನರಿಗೆ ಕುಡಿಯುವ ನೀರು, ಊಟ, ಮಜ್ಜಿಗೆ ಪ್ಯಾಕೆಟ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ರೈಲ್ವೆ, ಕೃಷಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಮನರಂಜನಾ-ಸಾಂಸ್ಕೃತಿಕ ಕಾರ್ಯಕ್ರಮ:
 ಪ್ರಧಾನಮಂತ್ರಿಗಳು ಮುಖ್ಯ ವೇದಿಕೆಗೆ ಆಗಮಿಸುವುದಕ್ಕಿಂತ ಮುಂಚೆ ಝೀ ಟಿವಿ ಕಲಾವಿದರು ಪರ್ಯಾಯ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರ್ಲಿ, ಮಾಧ್ಯಮ ಸಂಚಾಲಕ ರವೀಂದ್ರ ಮುತಾಲಿಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
https://pragati.taskdun.com/temporary-cancellation-of-some-transports-in-belgaum-section/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button