ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್ (Health Tips)
ತುಂಬಾ ಜನಕ್ಕೆ ಬೆಳಗ್ಗೆ ಬೇಗನೆ ಎದ್ದೇಳಬೇಕು, ಆರೋಗ್ಯಕರ ಜೀವನ ನಡೆಸಬೇಕು ಎಂಬ ಆಸೆ ಇರೋದು ಸಹ. ಆದರೆ ಅಲಾರ್ಮ್ ಹೊಡೆದರೂ ಎಚ್ಚರವೇ ಆಗಲ್ಲ. ಎಚ್ಚರವಾದರೂ ಎದ್ದೇಳುವ ಮನಸ್ಸು ಬರೋದಿಲ್ಲ.
ಬೆಳಗ್ಗೆ ಬೇಗನೆ ಎದ್ದೇಳಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವ ಮೊದಲು, ನಾವು ಬೆಳಗ್ಗೆ ಯಾಕೆ ಬೇಗ ಏಳಬೇಕು ಎಂದು ಅರಿತುಕೊಳ್ಳುವುದು ಒಳ್ಳೆಯದು. ನಾವು ಕೆಲವರನ್ನು ನೋಡಿರುತ್ತೇವೆ. ರಾತ್ರಿ 11-12 ಗಂಟೆಯವರೆಗೂ ಕೆಲಸ ಮಾಡುತ್ತಾರೆ. ಮತ್ತೆ ಬೆಳಗ್ಗೆ 5-6ಕ್ಕೆಲ್ಲ ಎದ್ದು ವ್ಯಾಯಾಮ ಮಾಡಿ ಲವಲವಿಕೆಯಿಂದ ಇರುತ್ತಾರೆ.
ನಾಳೆ ಲವಲವಿಕೆಯಿಂದ ಇರಲು ಎನರ್ಜಿ ಬೇಕು, ಅದಕ್ಕೆ ಒಳ್ಳೆಯ ನಿದ್ದೆಯೂ ಬೇಕು. ಆದರೆ ಅದೇ ನಿದ್ದೆ ನಮ್ಮನ್ನು ಆಲಸ್ಯಕ್ಕೂ ದೂಡಬಲ್ಲದು. ನಮಗೆ ಅವಷ್ಯಕತೆ ಇದ್ದಷ್ಟೇ ನಿದ್ದೆ ಮಾಡಬೇಕು.
ಈ ಅದ್ಭುತ ಟಿಪ್ಸ್ಗಳನ್ನು ಫಾಲೋ ಮಾಡಿದರೆ ಉತ್ತಮ ನಿದ್ದೆಯನ್ನೂ ಪಡೆದು, ಬೆಳಗ್ಗೆ ಬೇಗನೇ ಏಳಲು ಅನುಕೂಲವಾಗಬಲ್ಲದು.
1) ರಾತ್ರಿ ಮಲಗುವ ಮೊದಲು ಹೆಚ್ಚು ತಿನ್ನಬೇಡಿ
ತುಂಬಾ ಜನ ರಾತ್ರಿ ಊಟವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ರಾತ್ರಿ ವೇಳೆ ದೈಹಿಕ ಚಟುವಟಿಕೆ ಕಡಿಮೆ ಆಗುವುದರಿಂದ ತಿಂದ ಆಹಾರ ಜೀರ್ಣವಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಹಾಗಾಗಿ ನಿದ್ದೆ ಬರುವುದೇ ತಡವಾಗುತ್ತದೆ. ಇದರಿಂದ ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ. ಅಲ್ಲದೇ ಬೆಳಗ್ಗೆ ಎದ್ದಮೇಲೂ ಸಹ ಆಲಸ್ಯ ಮೈಗೂಡಿರುತ್ತದೆ. ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಆಹಾರವನ್ನು ರಾತ್ರಿ ಸೇವೆಸಬೇಡಿ, ಒಂದು ಹದದಲ್ಲಿ ತಿನ್ನಿರಿ.
2) ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಸ್ವಿಚ್ ಆಫ್ ಮಾಡಿ
ಮಲಗುವ ಮೊದಲು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮತ್ತಿತರ ಗ್ಯಾಜೆಟ್‌ಗಳನ್ನು ಬಳಸುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗಿದೆ. ನಮಗೆ ಗೊತ್ತಿಲ್ಲದೇ ಗ್ಯಾಜೆಟ್‌ಗಳಿಗೆ ಅಡಿಕ್ಟ್ ಆಗುತ್ತಿದ್ದೇವೆ. ಇದರಿಂದ ಕಣ್ಣು, ಮತ್ತು ಮೆದುಳಿನ ಮೇಲೆ ಪರಿಣಾಮವಾಗುತ್ತದೆ. ಮೆದುಳಿಗೆ ನಿದ್ದೆ ಆವರಿಸುವುದು ತಡವಾಗುತ್ತದೆ. ಹಾಗಾಗಿ ರಾತ್ರಿ ಮಲಗುವ ಕನಿಷ್ಟ ಒಂದು ತಾಸು ಮೊದಲೇ ಗ್ಯಾಜೆಟ್‌ಗಳನ್ನು ಸ್ವಿಚ್ ಆಫ್ ಮಾಡಿ.
3) ಮುಂಚಿತವಾಗಿಯೇ ಮಲಗಿ
ಬೇಗ ಮಲಗಿದರೆ ಮಾತ್ರ ಬೇಗ ಏಳಲು ಸಾಧ್ಯ, ಹಾಗಾಗಿ ತೀರ ನಿದ್ದೆ ಬಂದ ಬಳಿಕವೇ ಹಾಸಿಗೆಗೆ ಹೋಗುವ ಬದಲು ನಿದ್ದೆ ಬರುವ ಅರ್ಧ ಗಂಟೆ ಮೊದಲೇ ಹಾಸಿಗೆಗೆ ಹೋಗುವ ಅಭ್ಯಾಸ ಮಾಡಿಕೊಳ್ಳಿ. ನಿದ್ದೆ ಹತ್ತುವುದೇ ಇಲ್ಲ ಎಂದು ಕಂಡಲ್ಲಿ, ಮೊಬೈಲ್ ಲ್ಯಾಪ್‌ಟಾಪ್ ಬದಲು ಒಳ್ಳೆಯ ಪುಸ್ತಕವನ್ನು ಸ್ವಲ್ಪ ಹೊತ್ತು ಓದಿ, ಮಲಗುವ ಮೊದಲು ಒಂದು ಗ್ಲಾಸ್ ಹಾಲನ್ನು ಕುಡಿಯುವುದರಿಂದ ಒಳ್ಳೆಯ ನಿದ್ದೆಗೆ ಸಹಾಯ ಒದಗುತ್ತದೆ.
4) ಅಲಾರ್ಮ್ ಅನ್ನು ದೂರದಲ್ಲಿಡಿ
ತುಂಬಾ ಜನ ಬೆಳಗ್ಗೆ ಬೇಗ ಏಳುವ ಸಲುವಾಗಿ ಅಲಾರಾಂ ಇಟ್ಟಿರುತ್ತಾರೆ, ಆದರೆ ಅಲಾರಾಂ ಮೊಳಗುತ್ತಿದ್ದಂತೆ ಅದನ್ನು ನಿದ್ದೆಗಣ್ಣಲ್ಲೇ ಆಫ್ ಮಾಡಿ ಮತ್ತೆ ಮಲಗಿಬಿಡುತ್ತಾರೆ. ಹಾಗಾಗಿ ಅಲಾರಾಂ ಅನ್ನು ಕೈಗೆ ಎಟುಕದಂತೆ ದೂರದಲ್ಲಿಡಿ. ಹೀಗೆ ಮಾಡಿದರೆ ಬೆಳಗ್ಗೆ ಅಲಾರಾಂ ಮೊಳಗಿದಾಗ ಅದನ್ನು ಬಂದ್ ಮಾಡದೆ ಏಳಲು ಸಾಧ್ಯವಾಗುತ್ತದೆ. ದೂರದಲ್ಲಿರುವ ಅಲಾರಾಮನ್ನು ಆಫ್ ಮಾಡಬೇಕು ಎನಿಸಿದರೂ ನಾಲ್ಕಾರು ಹೆಜ್ಜೆ ನಡೆಯಬೇಕು. ಹೀಗೆ ಅಲಾರಾಮಿನ ಎಡೆಗೆ ಹೋಗುವ ಮೊದಲು ಒಂದು ಗ್ಲಾಸ್ ಶುದ್ಧ ನೀರು ಕುಡಿಯಿರಿ, ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಈ ಅಭ್ಯಾಸದಿಂದ ಮತ್ತೆ ಹಾಸಿಗೆಯ ಮೇಲೆ ಮಲಗುವ ಇಚ್ಛೆ ಬರುವುದಿಲ್ಲ.
5) ಬೆಳಗ್ಗೆ ಎದ್ದು ಏನು ಮಾಡಬೇಕು ?
ಬೆಳಗ್ಗೆ ಬೇಗ ಎದ್ದು ಏನು ಮಾಡಬೇಕು ಎಂಬ ಯೋಜನೆ ಮೊದಲೇ ಇಲ್ಲದಿದ್ದರೆ ಏಳುವುದು ಕಷ್ಟ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ನಿಮಗೆ ಇಷ್ಟವಾಗುವ ಯಾವುದಾದರೂ ಕೆಲಸ ಮಾಡುವ ಬಗ್ಗೆ ರಾತ್ರಿಯೇ ಯೋಜನೆ ಹಮ್ಮಿಕೊಳ್ಳಿ. ಓದುವುದು, ಬರೆಯುವುದು, ಪ್ರಾರ್ಥನೆ, ವಾಕಿಂಗ್ , ವ್ಯಾಯಾಮ ಇತ್ಯಾದಿ ಯಾವುದಾದರೂ ನಿಮ್ಮ ಮನಸ್ಸಿಗೆ ಹಿತವೇನಿಸುವ ಕೆಲಸವನ್ನು ಎದ್ದ ಕೂಡಲೇ ಮಾಡುವ ಯೋಜನೆ ಇದ್ದಾಗ ಏಳುವುದು ಹಿತವೆನಿಸುತ್ತದೆ.
6) ಈ ಟೆಕ್ನಿಕ್‌ಗಳನ್ನು ಬಳಸಿ
ನಿದ್ದೆಯಿಂದ ಎದ್ದ ತಕ್ಷಣ ಕೆಲವರು ಮತ್ತೆ ಮಲಗಿಬಿಡುತ್ತಾರೆ. ಹೀಗೆ ಮತ್ತೆ ಮಲಗಬಾರದೆಂದರೆ ಈ ಕೆಲವು ಟೆಕ್ನಿಕ್‌ಗಳನ್ನು ಬಳಸಿ, ಮೊದಲನೇಯದಾಗಿ ಎದ್ದ ತಕ್ಷಣ ಹಾಸಿಗೆ ಹೊದಿಕೆಯನ್ನು ನೀಟಾಗಿ ಮಡಚಿ ಇಡಿ. ಎಲ್ಲವನ್ನೂ ನೀಟಾಗಿ ಮಡಚಿಟ್ಟಮೇಲೆ ಮತ್ತೆ ಮಲಗಬೇಕು ಎನಿಸುವುದಿಲ್ಲ. ಕಿಟಕಿಗಳನ್ನು ತೆರೆದು ಕೋಣೆಯೊಳಗೆ ಬೆಳಕು ಬರುವಂತೆ ನೋಡಿಕೊಳ್ಳಿ. ಬಿಸಿ ಬಿಸಿ ಕಾಫಿ, ಅಥವಾ ನಿಂಬೆ ಹಣ್ಣು ಹಿಂಡಿದ ಚಹಾ ಇತ್ಯಾದಿ ಸೇವಿಸಿ. ಒಮ್ಮೆ ಫ್ರೆಶ್ ಅನಿಸಿದಮೇಲೆ ಮತ್ತೆ ನಿದ್ದೆ ಮಾಡಬೇಕು ಅನಿಸುವುದಿಲ್ಲ.
7) ವ್ಯಾಯಾಮ
ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡಿದರೆ ನೀವು ಆರೋಗ್ಯಕರ ಜೀವನದಲ್ಲಿ ಹೆಜ್ಜೆ ಇಟ್ಟಂತೆ. ಮಲಗುವ ಮೊದಲೇ ವ್ಯಾಯಾಮಕ್ಕೆ ಬೇಕಾದ ಅಗತ್ಯ ವಸ್ತ್ರಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ.
8) ಬೆಳಗಿನ ಉಪಾಹಾರ
ಬಹಳಷ್ಟು ಜನ ತಡವಾಗಿ ಏಳುವವರು ಬೆಳಗಿನ ಉಪಾಹಾರ ಸೇವಿಸುವುದಿಲ್ಲ. ಆದರೆ ಬೆಳಗಿನ ಉಪಾಹಾರ ದೇಹದ ಶಕ್ತಿಗೆ ಅತ್ಯಂತ ಅಗತ್ಯ. ಪ್ರೋಟಿನ್‌ಯುಕ್ತ ಆಹಾರ ಪದಾರ್ಥವನ್ನು ಬೆಳಗ್ಗೆ ಸೇವಿಸಿದರೆ, ಅದು ನಿಮಗೆ ಇಡೀ ದಿನಕ್ಕೆ ಅಗತ್ಯವಿರುವ ಚೈತನ್ಯವನ್ನು ಕೊಡುತ್ತದೆ. ಹಾಗಾಗಿ ಬೇಗ ಏಳಲು ಪ್ರಾರಂಭಿಸಿದ ಮೇಲೆ ಬೆಳಗಿನ ಉಪಾಹಾರವನ್ನು ನಿರ್ಲಕ್ಷ್ಯ ಮಾಡಬೇಡಿ.
ಈ ಎಲ್ಲ ಹೆಜ್ಜೆಗಳನ್ನೂ 21 ದಿನಗಳ ಕಾಲ ಚಾಚೂ ತಪ್ಪದೆ ಪಾಲಿಸಿದರೆ ನಂತರ ಅದು ನಿಮ್ಮ ಬದುಕಿನ ಭಾಗವಾಗುತ್ತದೆ. ಬೆಳಗ್ಗೆ ಬೇಗನೇ ಏಳುವ ನಿಮ್ಮ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ.
ಚಿಕ್ಕೋಡಿ: ಪತ್ನಿ ಮೇಲೆ ಕಣ್ಣು ಹಾಕಿದನೆಂದು ಯುವಕನ ಕೊಲೆಗೈದ ಆರೋಪಿ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ