ನೀತಾ ರಾವ್
ಈಗೀಗ ಎಲ್ಲರಿಗೂ ಆರೋಗ್ಯದ ಬಗ್ಗೆ ಕಳಕಳಿ, ಚಿಂತೆ ಮತ್ತು ಹುಚ್ಚು ಹೆಚ್ಚಾದ್ದರಿಂದ ನಾನಾ ನಮೂನೆಯ ಸರ್ಕಸ್ ನಡೆಸಿದ್ದಾರೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಮಾರ್ನಿಂಗ್ ವಾಕ್ ಅಥವಾ ಬೆಳಗಿನ ವಾಯುವಿಹಾರ. ಸ್ವಚ್ಛ ಗಾಳಿ, ಬೆಳಕು, ನೀರು ಸಿಗುವುದೇ ದುಸ್ತರವಾಗಿರುವ, ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟಿರುವ ನಮ್ಮ ಊರುಗಳಲ್ಲಿ ಬೆಳಿಗ್ಗೆಯಲ್ಲದೇ ಉಳಿದ ವೇಳೆಯಲ್ಲಿ ವಾಕಿಂಗ್ ಸಾಧ್ಯವೇ ಇಲ್ಲ ಎನ್ನುವುದೂ ನಿಜ. ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳ ಬಯಸುವ ಎಲ್ಲ ಜನರೂ ವಯಸ್ಸಿನ ಭೇದ ಮರೆತು ಬೆಳಗಿನ ವಾಯುವಿಹಾರಕ್ಕೆ ಹೊರಟಿದ್ದಾರೆ.
ಆದರೆ ಮುಂಜಾನೆಯ ವಾಕಿಂಗ್ ನ್ನು ಜನರು ಕೇವಲ ತಮ್ಮ ಆರೋಗ್ಯಕ್ಕಾಗಿ ಮಾಡುತ್ತಾರೆ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ಮುಗ್ಧತನವಲ್ಲ, ಮೂರ್ಖತನ. ಈ ಬೆಳಗಿನ ತಿರುಗಾಟಕ್ಕೆ ವಿಧವಿಧವಾದ ಕಾರಣ ಮತ್ತು ಉದ್ದೇಶಗಳಿರುತ್ತವೆ. ಮಾರ್ನಿಂಗ್ ವಾಕರ್ಸಗಳಲ್ಲಿಯೂ ವಿಧವಿಧ ವಯಸ್ಸು ಮತ್ತು ಪ್ರಕಾರದ ಜನರಿರುತ್ತಾರೆ. ಹುಡುಗರು ಆಲಸ್ಯದಿಂದ ಹಾಸಿಗೆಯ ಮೇಲೆ ಬಿದ್ದುಕೊಂಡೇ ವಾಕಿಂಗ್ ಕನಸು ಕಾಣಬೇಕೆಂದವರು ಸುಂದರವಾದ ಸ್ಲಿಮ್ ಹುಡುಗಿಯೊಬ್ಬಳು ವಾಕಿಂಗಿಗೆ ಬರುತ್ತಾಳೆಂದು ತಿಳಿದರೆ ಸಾಕು, ಅಲಾರ್ಮ ಇಟ್ಟುಕೊಂಡು ಅದು ಹೊಡೆದುಕೊಳ್ಳುತ್ತಲೇ ಒಮ್ಮಿಲೇ ಪುಟಿದೇಳುತ್ತಾರೆ. ಜಾಗಿಂಗ್ ಡ್ರೆಸ್ ಏರಿಸಿಕೊಂಡು ಶೂ ತೊಟ್ಟುಕೊಂಡು ಬೆಳಗ್ಗೆ ಬೆಳಗ್ಗೆ ಹೊರಟುಬಿಡುತ್ತಾರೆ. ದಿನಾಲೂ ಅಭ್ಯಾಸ ಮಾಡಿಸಲು ಇವರನ್ನು ಎಬ್ಬಿಸಿ ಎಬ್ಬಿಸಿ ಸುಸ್ತಾದ ತಾಯಂದಿರಿಗೆ ಇವರ ಗುಟ್ಟು ತಿಳಿಯದೇ ಮೂಗಿನ ಮೇಲೆ ಬೆರಳಿಟ್ಟುಕೊಂಡು “ನನ್ನ ಮಗ ಯಾವತ್ತಿನಿಂದ ಇಷ್ಟು ಜಾಣನಾದ?” ಎಂದು ತಲೆ ಕೆರೆದುಕೊಳ್ಳುತ್ತಾರೆ.
ಹಾಗೆ ಹುಡುಗಿಯರ ಮುಖ ನೋಡಲೆಂದೇ ಓಡುವ ಹುಡುಗರಿಗೆ ಒಂದೇ ಮುಖ ದಿನಾಲೂ ದರ್ಶನ ನೀಡಬೇಕೆಂದೇನೂ ವ್ರತವಿಲ್ಲ. ಸೀತಾ, ಗೀತಾ, ಲೈಲಾ, ಪಾಪಿ ಎಲ್ಲರೂ ದೇವರು ತಮ್ಮ ಕಣ್ಣಿಗೆ ಕೊಟ್ಟ ವರಗಳೆಂದೇ ತಿಳಿದು ಯಾರನ್ನು ನೋಡಿದರೂ ಮುಖ ಅರಳಿಸಿ, ಬಾಯಿ ಅಗಲಿಸಿ ಹುಡುಗಿಯರ ಹೃದಯದಲ್ಲಿ ಸುಖಾಸುಮ್ಮನೇ ಅಲೆಗಳನ್ನೆಬ್ಬಿಸುತ್ತಾರೆ. ಹುಡುಗಿಯರಿಗೂ ಬೆಳಗಿನ ಹೊತ್ತಿನಲ್ಲಿ ಒಂದಿಷ್ಟು ಮೆಚ್ಚುಗೆಯ ನೋಟದ ತಂಗಾಳಿ ಬೀಸಿಬಂದರೆ ಆರೋಗ್ಯಕ್ಕೆ ಒಳ್ಳೆಯದೇ. ಹೀಗೆ ತರುಣ-ತರುಣಿಯರ ಬೆಳಗಿನ ತಿರುಗಾಟದ ಉದ್ದೇಶಗಳು ನಮ್ಮ ಕಣ್ಣಿಗೆ ಸಾಫ ನಜರ ಸಿಗುತ್ತವೆ. ಮಜಾ ಇರುವುದು, ಮಜಾ ಸಿಗುವುದು ಇತರರ ಮಾರ್ನಿಂಗ್ ವಾಕುಗಳಲ್ಲಿ.
ಕೆಲ ಮಧ್ಯವಯಸ್ಸಿನ ನಾಗರಿಕರು ವಿವಿಧೋದ್ದೇಶ ವಾಕಿಗೆ ಹೊರಡುತ್ತಾರೆ. ಹೊರಡುವ ಮುಂಚೆ ಕಾಲಕ್ಕೆ ತಕ್ಕಂತೆ ವೇಶಭೂಷಣಗಳನ್ನು ನೀಟಾಗಿ ಮಾಡಿಕೊಳ್ಳುತಾರೆ. ಮಳೆಗಾಲವಿದ್ದು ಮೋಡ ಕವಿದ ವಾತಾವರಣವಿದ್ದರೆ ಇವರ ಕೈಯಲ್ಲಿ ಕೊಡೆ ಬರುತ್ತದೆ. ಮಳೆ ಬಂದರೆ ತೆರೆದುಕೊಂಡು ಮಳೆಯ ಹೊಡೆತದಿಂದ ತಪ್ಪಿಸಿಕೊಳ್ಳಲೂ ಆಯಿತು, ಗೊತ್ತಿಲ್ಲದ ಓಣಿಗಳಲ್ಲಿ ದಂಡನಾಯಕರಂತೆ ಕುಳಿತ ಬೀದಿನಾಯಿಗಳ ಕಾಟ ತಪ್ಪಿಸಿಕೊಳ್ಳುವ ಆಯುಧವೂ ಆಯಿತು, ಅಲ್ಲಲ್ಲಿ ಬೇಕಿದ್ದರೆ ಊರುಗೋಲಂತೆ ಸಹಾಯವೂ ಆಯಿತು ಎಂದು ಇಟ್ಟುಕೊಂಡಿರುತ್ತಾರೆ.
ಇನ್ನೂ ಕೆಲವರು ಊರುಗೋಲನ್ನು ಜೊತೆಗಿರಿಸಿಕೊಂಡೇ ಹೊರಡುತ್ತಾರೆ. ಅದರ ಸಹಾಯವಿಲ್ಲದೇ ನಡೆಯಲು ಬರುವುದಿಲ್ಲವೆಂದಲ್ಲ, ಅದು ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುತ್ತದೆಂದು. ಹೀಗೆ ಹೊರಡುವ ಮಧ್ಯ ವಯಸ್ಸಿನವರಲ್ಲಿ ವಾನಪ್ರಸ್ಥದ ಅರಿವು ಜಾಗೃತವಾಗಿ ಇನ್ನಾದರೂ ಸ್ವಲ್ಪ ದೇವರು-ದಿಂಡರು ಅಂತ ಕಾಲ ಕಳೆಯೋಣವೆಂಬ ಹಂಬಲ ತನ್ನಿಂದ ತಾನೇ ಹುಟ್ಟಿಕೊಂಡುಬಿಟ್ಟಿರುತ್ತದೆ. ಹಾಗಾಗಿ ವಿಶ್ರಾಂತ ಜೀವನದಲ್ಲಾದರೂ ದೇವರ ಪೂಜೆಯನ್ನು ಮಾಡೋಣವೆಂದು ಶುರುಹಚ್ಚಿಕೊಂಡಿರುತ್ತಾರೆ.
ದೇವರ ಪೂಜೆಯೆಂದ ಮೇಲೆ ಅವನ ತಲೆಯ ಮೇಲೊಂದಿಷ್ಟು ನೀರು ಹಾಕಿ ತೊಳೆದು ಹೂವುಗಳಿಂದ ಅಲಂಕರಿಸಬೇಡವೇ? ಆದರೆ 30×40ರ ಅವರ ಸೈಟಿನಲ್ಲಿ ಮನೆಯೇ ಬಿಗಿದು ಕುಳಿತಿರುವಾಗ, ಅಥವಾ ಒತ್ತಿಕಟ್ಟಿದ ಅಪಾರ್ಟಮೆಂಟನ, ಕಾಲ ಕೆಳಗಿನ ನೆಲವೂ ತಮ್ಮದಲ್ಲದ ತಲೆಯ ಮೇಲಿನ ಸೂರೂ ತಮ್ಮದೆನಿಸದ ಆ ಕಿಷ್ಕಿಂಧಾಪಟ್ಟಣದಲ್ಲಿ ಹೂವಿನ ಕುಂಡಗಳನ್ನಿಡಲು ಎಲ್ಲಿಂದ ಜಾಗವನ್ನು ತಂದಾರು? ಹಾಗಾಗಿ ರಾಯರ (ಅಥವಾ ಆಂಟಿಗಳ) ಸವಾರಿ ಈ ಊರುಗೋಲಿನ ಸಮೇತ ಹೊರಟಿರುತ್ತದೆ. ಇನ್ನೂ ಜಾಣರು ಜೊತೆಗೊಂದು ಪ್ಲಾಸ್ಟಿಕ್ ಕವರನ್ನು ಕೂಡ ಇಟ್ಟುಕೊಂಡಿರುತ್ತಾರೆ.
ಬೆಳಿಗ್ಗೆ ಬೇಗ ಎದ್ದು ಮಳೆ, ಗಾಳಿ, ಚಳಿಗೆ ಹೆದರದೇ ವಾಕ್ ಹೊರಡುವ ಇವರು ಹಾಗೆ ಹೋಗುವಾಗ ಹಾದಿ-ಬೀದಿಯಲ್ಲಿನ ಎಲ್ಲ ಮನೆಗಳನ್ನೂ ಅವುಗಳ ಅಂಗಳಗಳನ್ನೂ ಸರ್ವೆ ಮಾಡಿರುತ್ತಾರೆ. ಯಾರ ಮನೆಯಲ್ಲಿ ಗುಲಾಬಿ ಹೂವಿನ ಗಿಡಗಳಿವೆ, ಕೆಂಪು ಗುಲಾಬಿ ಯಾರ ಮನೆಗಳಲ್ಲಿದೆ, ಯಾರ ಮನೆಯ ದಾಸವಾಳದ ಗಿಡಗಳಲ್ಲಿ ಹೂಗಳು ಸುರಿಯುತ್ತಿವೆ, ಮಲ್ಲಿಗೆಯ ಬಳ್ಳಿಗಳು ಯಾರ ಅಂಗಳದಲ್ಲಿವೆ, ಹೀಗೆ ಎಲ್ಲ ಲೆಕ್ಕವನ್ನೂ ಕರಾರುವಕ್ಕಾಗಿ ಇಟ್ಟುಕೊಂಡಿರುತ್ತಾರೆ. ನಾಳೆ ಯಾರ ಮನೆಯ ಹೂಗಳು ಸರಿಯಾಗಿ ಅರಳುತ್ತವೆ ಎನ್ನುವುದೂ ಇವರಿಗೆ ಗೊತ್ತಿರುತ್ತದೆ.
ಹಾಗಾಗಿ ಸರ್ವ ತಯಾರಿಯೊಂದಿಗೇ ಹೊರಟು ಒಂದೊಂದೇ ಮನೆಯ ಹೂಗಳನ್ನು ಬಿಡಿಸುತ್ತಾರೆ. ಬಹಳ ಎತ್ತರದಲ್ಲಿದ್ದರೆ ಈ ಬಡಿಗೆಗಳು ಅವರ ಸಹಾಯಕ್ಕೆ ಒದಗುತ್ತವೆ. ಹಾಗೆ ತೆಗೆದ ಹೂಗಳನ್ನು ಕವರಿನಲ್ಲಿ ನಾಜೂಕಾಗಿ ಹಾಕಿಕೊಂಡು ಮುನ್ನಡೆಯುವಾಗ ಮನೆಯ ಯಜಮಾನರೇ ಎದುರಾಗಿ ಬಿಟ್ಟರೂ ತಳಮಳಗೊಳ್ಳದೇ ಅವರ ಮನೆಯ ಹೂಗಳಲ್ಲಿಯೇ ಅವರಿಗೂ ಒಂದೆರಡನ್ನು ಕೊಟ್ಟು ಹುಳಿನಗೆಯೊಂದನ್ನು ಬೀರಿ ಮುನ್ನಡೆವ ಭಂಡತನವನ್ನು ಹೂಗಳ ಮೇಲಿನ ಪ್ರೀತಿ ಅವರಿಗೆ ಕಲಿಸಿಬಿಟ್ಟಿರುತ್ತದೆ.
ಮನೆಯ ಮಾಲಕರೂ ಬೆಳಿಗ್ಗೆಬೆಳಿಗ್ಗೆಯೇ ಏನು ವೃದ್ಧರೊಂದಿಗೆ ಜಗಳವಾಡುವುದೆಂದು ಸುಮ್ಮನಾಗುತ್ತಾರೆಂದು ಅವರಿಗೆ ಗ್ಯಾರಂಟಿ. ಎಲ್ಲೋ ಒಬ್ಬರು ಜೋರು ಮಾಡಿದರೆ ಇವರೂ ಹಾಗೆಲ್ಲ ಸುಮ್ಮನೇ ಬರುವವರಲ್ಲ. “ನಾವಾದ್ರೂ ಏನು ನಿಮ್ಮ ಮನೆ ಹೂ ತೆಗದು ನಮ್ಮ ತಲೆಗೆ ಹಾಕ್ಕೋತೇವೇನ್ರೀ? ಆ ಭಗವಂತನಿಗೇ ಹಾಕತೇವಿ, ನಿಮಗೂ ಪುಣ್ಯಾ ಬರ್ತದ ಬಿಡ್ರಿ” ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅಂದರೆ ಬೈದು ಹೂಕೊಯ್ಯುವುದನ್ನು ಬಿಡಿಸಿದರೆ, “ನಾವೇನೋ ಪಾಪ ಅಂತ ನಿಮಗೂ ಮಾಡಿಸುತ್ತಿರುವ ಫಲಪ್ರಾಪ್ತಿಯೂ ತಪ್ಪಿಹೋಗುತ್ತದೆ” ಎಂದು ಪಾಪಭೀತಿಯಲ್ಲಿ ನಿಮ್ಮನ್ನು ನರಳಿಸಿ ನರಳಿಸಿ ಕೊನೆಗೆ “ದಿನಾಲೂ ನಾಲ್ಕು ಹೂ ತೊಗೊಂಡಹೋದ್ರೆ ಹೋಗ್ಲಿ ಮಾರಾಯ” ಎಂದು ನಿಮಗೇ ಅನಿಸುವಂತೆ ಮಾಡಿಬಿಡುವಷ್ಟು ಚಾಣಾಕ್ಷರಿವರು.
ಮೊದಲು ಇದು ಬರಿ ಸಿಟಿಗಳ ಹೃದಯಭಾಗದಲ್ಲಿರುವ ಗಲ್ಲಿಗಳಲ್ಲಿ ಮಾತ್ರ ನಡೆಯುತ್ತದೆಂದು ತಿಳಿದುಕೊಂಡಿದ್ದೆ, ಆದರೆ ಹೊಸ ಬಡಾವಣೆಗಳ ಹಿರಿಯ ನಾಗರೀಕರೂ ನಾವೇನೂ ಕಡಿಮೆಯಿಲ್ಲ ಎನ್ನುವಂತೆ ಮುಂಜಾನೆ ಹೂ ಕೀಳುವುದನ್ನು ನೋಡಿ “ಪರರ ಹೂವನು ಹರಿ(ರ)ಗೆ ಅರ್ಪಿಸಿ ವರವ ಪಡೆದವರನ್ನು” ಕಣ್ಣತುಂಬ ನೋಡಿ ಧನ್ಯಳಾದೆ ಎನಿಸಿತು.
ಕೆಲವು ವಯಸ್ಸಾದ ಗಂಡಸರಿಗೆ ಮತ್ತು ಹೆಣ್ಣುಮಕ್ಕಳಿಗೆ ಈ ಮಾರ್ನಿಂಗ್ ವಾಕ್ ಎಂದರೆ ಮನಸ್ಸಿನಲ್ಲಿರುವ ನೂರೆಂಟು ನೋವುಗಳನ್ನು ಓರಿಗೆಯವರ ಮುಂದೆ ಹೇಳಿಕೊಳ್ಳಲು ಇರುವ ಕೌನ್ಸೆಲ್ಲಿಂಗ್ ಟೈಮ್ ಇದ್ದಂತೆ. ತಮ್ಮ ಮನೆಯ ಸೊಸೆಯ ಕಿರುಕಳದ ಸುದ್ದಿ, ಗಂಡನ ಕಿಸಿಕಿಸಿ ಹಾಯುವ ಕೆಟ್ಟ ಗುಣ, ಅತ್ತೆಯ ಸರ್ವಾಧಿಕಾರಿ ನಡತೆ ಇಂಥವೆಲ್ಲ ಹೆಣ್ಣು ಮಕ್ಕಳ ವಿಷಯಗಳಾದರೆ, ಪೆನ್ಶನ್ ಇನ್ನೂ ಹೆಚ್ಚಾಗದೇ ಇದ್ದದ್ದು, ಡಿ.ಎ. ಅರಿಯರ್ಸ ಇನ್ನೂ ಬರದೇ ಇರುವುದು, ಬಾಸನ ಕಿರುಕಳ, ಮುಂತಾದವು ಗಂಡಸರ ಅಂತರಂಗದ ನೋವುಗಳು. ಇವುಗಳೆಲ್ಲ ತೆರೆದುಕೊಳ್ಳುವುದು ಬೆಳಗಿನ ವಾಯುವಿಹಾರದ ವೇಳೆ ಸಿಗುವ ಸಮಾನ ಮನಸ್ಕ ಗೆಳೆಯ-ಗೆಳತಿಯರ ಮುಂದೆ. ಹೀಗಾಗಿಯೇ ತ್ರಾಸಾದರೂ ಬೆಳಿಗ್ಗೆ ಎದ್ದು ತಿರುಗಾಟಕ್ಕೆ ಹೊರಡುತ್ತಾರೆ ಜನ. ಇನ್ನು ಕೆಲವರು ಆಟಗಳನ್ನಾಡುವವರೂ ಇದ್ದರೆ, ಕೆಲವರು ಬೆಳಿಗ್ಗೆ ಬೆಳಿಗ್ಗೆಯೇ ಹತ್ತಿರದ ಪುಟ್ಟ ಕ್ಯಾಂಟೀನಿಗೆ ನುಗ್ಗಿ ಚಹಾದ ಜೊತೆಗೆ ಒಂದು ಸಿಂಗಲ್ ಇಡ್ಲಿಯ ರುಚಿ ನೋಡಿಯೇ ಮನೆ ಮುಟ್ಟುತ್ತಾರೆ.
ಹೀಗೆ ಅವರವರ ಭಾವಕ್ಕೆ ತಕ್ಕಂತೆ ಬೇರೆ ಬೇರೆ ಉದ್ದೇಶಗಳಿಗಾಗಿ ಮಾಡಲ್ಪಡುವ ಈ ಮಾರ್ನಿಂಗ್ ವಾಕ್ ಅಂದರೆ ನನಗೂ ಪ್ರೀತಿ. ಅದು ಏನೆಲ್ಲ ಅನುಭವಗಳನ್ನು ನೀಡಿ ಮನವನ್ನು ಮುದಗೊಳಿಸುತ್ತದೆ ಅಲ್ವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ