*ಹಾಸಿಗೆ ಹಿಡಿದಿದ್ದ ಅಂಗವಿಕಲ ಮಗಳನ್ನು ಕತ್ತಿಯಿಂದ ಕಡಿದು ಸಾಯಿಸಿ ತಾಯಿಯೂ ಆತ್ಮಹತ್ಯೆಗೆ ಶರಣು!*

ಪ್ರಗತಿವಾಹಿನಿ ಸುದ್ದಿ: ತಂದೆ ಕೂಲಿ ಕೆಲಸಕ್ಕೆ ತೆರಳಿದ ಬೆನ್ನಲ್ಲೇ ಮನೆಯಲ್ಲಿ ಘೋರ ದುರಂತ ಸಂಭವಿಸಿದೆ. ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದ 14 ವರ್ಷದ ಮಗಳನ್ನು ಕೊಲೆ ಮಾಡಿದ ಆರೋಪದ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗಳ ಸಾವಿನಿಂದ ಕುಟುಂಬದಲ್ಲಿ ಶೋಕ ಆವರಿಸಿದ್ದು, ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೃತರನ್ನು 40 ವರ್ಷದ ನೇತ್ರಾವತಿ ಮತ್ತು ಪುತ್ರಿ ಸುಪ್ರತಿ (14) ಎಂದು ಗುರುತಿಸಲಾಗಿದೆ. ನೇತ್ರಾವತಿ ಅವರ ಪತಿ ಸುಧಾಕರ ಕೊರಗ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವೂ ಇದೆ. ಈ ದಾರುಣ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಗ್ರಾಮದ ಕೊರಗ ಕಾಲನಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಸುಪ್ರತಿ ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದು, ನಡೆಯಲು ಅಥವಾ ಕುಳಿತುಕೊಳ್ಳಲು ಸಾಧ್ಯವಾಗದೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದಳು. ಮಗಳ ಆರೈಕೆಯನ್ನು ನೇತ್ರಾವತಿ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಸುಧಾಕರ ಕೆಲಸಕ್ಕೆ ತೆರಳಿದ ಬಳಿಕ ನೇತ್ರಾವತಿ ಮಗಳ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಉಪವಿಭಾಗದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




