*ಲಿವ್ ಇನ್ ರಿಲೇಶನ್: ಮದುವೆಯಾದ ಒಂದೆ ವಾರಕ್ಕೆ 7 ತಿಂಗಳ ಗರ್ಭಿಣಿ ಹೆರಿಗೆ: ತಾಯಿ, ನವಜಾತ ಶಿಶು ಸಾವು*

ಹುಬ್ಬಳ್ಳಿ : ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲೋನಿಯಲ್ಲಿ ಒಂದೇ ವಾರದಲ್ಲಿ ಹೆರಿಗೆಯಾಗಿದ್ದ ತಾಯಿ, ನವಜಾತ ಶಿಶು ಇಬ್ಬರು ಕೂಡ ಸಾವನ್ನಪ್ಪಿದ್ದಾರೆ.
ಮೃತ ಬಾಣಂತಿಯನ್ನು ದಿವ್ಯಾ ಎಂದು ಗುರುತಿಸಲಾಗಿದೆ. ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕಳೆದ ಹತ್ತು ವರ್ಷದದಿಂದ ಕೃಪಾನಗರದ ಚರಣ್ ಎಂಬಾತನನ್ನು ಪ್ರೀತಿಸುತ್ತಿದ್ದರಿಂದ ಕೆಲ ವರ್ಷಗಳಿಂದ ಇಬ್ಬರು ಲಿವ್ ಇನ್ ರಿಲೇಶನ್ ನಲ್ಲಿ ಇದ್ದರು. ಈ ವೇಳೆ ಚರಣ್ ಮದುವೆಯಾಗುವುದಾಗಿ ಹೇಳಿ ಮೃತ ದಿವ್ಯಾ ಜೊತೆ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಹೀಗಾಗಿ ದಿವ್ಯ ಗರ್ಭಿಣಿಯಾಗುತ್ತಿದ್ದಂತೆ ಬಾ ಮದುವೆಯಾಗೋಣ ಎಂದು ಕೇಳಿದ್ದಳು. ಆದರೆ ಇದಕ್ಕೆ ಚರಣ್ ನನಗೆ ಇಷ್ಟಯಿಲ್ಲ ಎಂದು ಹೇಳಿ ನಿರಾಕರಿಸಿದ್ದ ಎಂದು ಆರೋಪಿಸಲಾಗಿದೆ.
ಪ್ರಿಯಕರನ ಮಾತಿನಿಂದ ಮನನೊಂದ ದಿವ್ಯಾ ಚರಣ್ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರಿನ ಮೇರೆಗೆ ಪೊಲೀಸರು ಆರೋಪಿ ಚರಣ್ ನನ್ನು ಕರೆಸಿ ಬುದ್ದಿವಾದ ಹೇಳಿ ಮದುವೆ ಮಾಡಿಕೋ ಎಂದು ಹೇಳಿ ಕಳುಹಿಸಿದ್ದರು.
ಬಳಿಕ ಚರಣ್ ದೇವಸ್ಥಾನವೊಂದರಲ್ಲಿ ದಿವ್ಯಾಳನ್ನು ಮದುವೆಯಾಗಿದ್ದಾನೆ. ಈ ಸಮಯದಲ್ಲಿ ದಿವ್ಯಾ 7 ತಿಂಗಳ ಗರ್ಭಿಣಿಯಾಗಿದ್ದಳು. ಇದಾಗಿ ಒಂದೇ ವಾರಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಪತಿ ಚರಣ್ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಈ ವೇಳೆ ಪರಿಶೀಲಿಸಿದ ವೈದ್ಯರು ಮಗು ಹೊಟ್ಟೆಯಲ್ಲೇ ಸತ್ತು ಹೋಗಿದೆ ಎಂದು ತಿಳಿಸಿದರು. ಇತ್ತ ಹೆರಿಗೆಯ ವೇಳೆ ದಿವ್ಯಾಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಈ ವೇಳೆ ರಕ್ತ ಹೊಂದಿಸುವಷ್ಟರಲ್ಲಿ ಬಾಣಂತಿ ಕೂಡ ಸಾವನ್ನಪ್ಪಿದ್ದಾಳೆ.