Kannada NewsLatest

107ನೇ ಕೆಎಲ್‌ಇ ಸಂಸ್ಥಾಪನಾ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ಸಂಸ್ಥೆಯು ಕೇವಲ ಅಂಕಿಸಂಖ್ಯೆಗಳನ್ನು ಹೆಚ್ಚು ಮಾಡುತ್ತಿಲ್ಲ, ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. ಇಂದು ಜಾಗತಿಕವಾಗಿ ವಿಸ್ತರಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಲೋಕಸಭಾ ಸದಸ್ಯರಾದ ಮಂಗಲ ಸುರೇಶ ಅಂಗಡಿಯವರು ಮಾತನಾಡಿದರು.

ಬೆಳಗಾವಿ ಜೆಎನ್‌ಎಂಸಿ ಜೀರಗೆ ಕೇಂದ್ರ ಸಭಾಗೃಹದಲ್ಲಿ ಜರುಗಿದ ಕೆಎಲ್‌ಇ ಸಂಸ್ಥೆಯ 107ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಯಶಸ್ಸಿನ ಮೆಟ್ಟಿಲು ಏರುವದಕ್ಕೆ ಕೆಎಲ್‌ಇ ಸಂಸ್ಥೆಯು ಏಣಿಯಾಗಿ ಕರ‍್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಹೇಗೆ ಕೆಎಲ್‌ಇ ಸಂಸ್ಥಾಪಕರು ಸಂಸ್ಥೆಯನ್ನು ಕಟ್ಟಿದರು ಹಾಗೆಯೇ ಸಂಸ್ಥೆಯ ಅಷ್ಟಮ ಋಷಿಗಳಾದ ಡಾ.ಪ್ರಭಾಕರ ಕೋರೆಯವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದಾರೆ. ಸಂಸ್ಥೆಯು ತನ್ನ ಗುಣಾತ್ಮಕವಾದ ಶಿಕ್ಷಣದಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿ ರಾಷ್ಟçನಿರ್ಮಾಣದಲ್ಲಿ ಕೈಜೋಡಿಸಿದೆ. ಈ ನೆಲೆಯಲ್ಲಿ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅನನ್ಯ ಅಸದೃಶವೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಉತ್ತರ ಕರ್ನಾಟಕದಲ್ಲಿ ಶತಮಾನಗಳ ಶೈಕ್ಷಣಿಕ ಹಸಿವು ನೀಗಿಸಿದವರು ಕೆಎಲ್‌ಇ ಸಪ್ತರ್ಷಿಗಳು. ಅಕ್ಷರ ದಾಸೋಹದ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಿದರು. ಇಂದಿಗೂ ಸಂಸ್ಥೆಯು ಧರ್ಮಾತೀತ ಹಾಗೂ ಜಾತ್ಯಾತೀವಾದ ಮೌಲ್ಯದ ಮೇಲೆ ಮುನ್ನಡೆದು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ ಎಂದು ಹೇಳಿದರು.

ಸಪ್ತರ್ಷಿಗಳು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ದೇಶಾದ್ಯಂತ ಸುಮಾರು 300ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. 1.38 ಲಕ್ಷ ವಿದ್ಯಾರ್ಥಿಗಳು ಅಧ್ಯಯದಲ್ಲಿ ತೊಡಗಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ರೈತರ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. ಮಾತ್ರವಲ್ಲದೆ ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿಯೂ ಮೌಲಿಕ ಸೇವೆಯನ್ನು ಕೆಎಲ್‌ಇ ಸಂಸ್ಥೆಯು ನೀಡಿದೆ ಎಂದು ಹೇಳಿದರು.

ಕೆಎಲ್‌ಇ ಆರೋಗ್ಯ ಸೇವೆಗಳು: ಈಗಾಗಲೇ ಪುಣೆಯಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದ್ದು, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಗೊಂಡಿದೆ. ಸದ್ಯದಲ್ಲಿಯೇ ಬೆಳಗಾವಿಯಲ್ಲಿ 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತಿದೆ. ಇಂದು 4500ಕ್ಕೂ ಹಾಸಿಗೆಗಳ ಆರೋಗ್ಯ ಸೇವೆಯು ಕೆಎಲ್‌ಇ ಸಂಸ್ಥೆಯದಾಗಿದೆ. ಅದರಲ್ಲಿ 1200 ಹಾಸಿಗೆಗಳನ್ನು ಬಡರೋಗಿಗಳಿಗೆ ಉಚಿತವಾಗಿ ಮೀಸಲಿಟ್ಟಿದೆ. ವಿದೇಶಗಳಲ್ಲಿ ದೊರೆಯುವ ಎಲ್ಲ ಚಿಕಿತ್ಸೆಯ ಸೌಲಭ್ಯಗಳನ್ನು ಕೆಎಲ್‌ಇ ಆಸ್ಪತ್ರೆಗಳು ನೀಡುತ್ತಿವೆ ಎಂದರು.

ಇಂದಿನ ಆಧುನಿಕ ಶಿಕ್ಷಣದ ಎಲ್ಲ ಬೇಕುಬೇಡಿಕೆಗಳನ್ನು ಕೆಎಲ್‌ಇ ಸಂಸ್ಥೆಯು ಪೂರೈಸುತ್ತಿದೆ. ಅಸಂಖ್ಯ ಕೋರ್ಸುಗಳನ್ನು ಮುನ್ನಡೆಸುತ್ತಿದೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಡಾ.ಸುಧಾಮೂರ್ತಿ, ಅನಂತಕುಮಾರ, ಬಿ ಶಂಕರಾನಂದ, ಜಗದೀಶ ಶೆಟ್ಟರ, ಬೊಮ್ಮಾಯಿ ಸೇರಿದಂತೆ ಅನೇಕರು ನಮ್ಮ ವಿದ್ಯಾರ್ಥಿಗಳು ಎಂಬುದು ನಮಗೆ ಅಭಿಮಾನದ ಸಂಗತಿ ಎಂದರು. ನಮ್ಮ ವಿದ್ಯಾರ್ಥಿಗಳೇ ನಮಗೆ ರಾಯಭಾರಿಗಳು. ಅವರಿಂದ ಕೆಎಲ್‌ಇ ಸಂಸ್ಥೆಯು ಮಿನುಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಬೆಳಗಾವಿಯ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಮಾತನಾಡಿ ಅನೇಕ ಮಹನೀಯರ ತ್ಯಾಗದ ಫಲವಾಗಿ ಸ್ಥಾಪನೆಗೊಂಡಿರುವ ಕೆಎಲ್‌ಇ ಸಂಸ್ಥೆಯು ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ಶ್ರೇಷ್ಠ ಶಿಕ್ಷಕರಿಂದ ಸ್ಥಾಪನೆಗೊಂಡಿರುವ ಈ ಸಂಸ್ಥೆಯು ಡಾ.ಕೋರೆಯವರಿಂದ ಅದ್ಭುತವಾಗಿ ಬೆಳೆದುನಿಂತಿದೆ. ಸಪ್ತರ್ಷಿಗಳ ಕನಸ್ಸನ್ನು ಡಾ.ಕೋರೆಯವರು ಸಾಕಾರಗೊಳಿಸಿದ್ದಾರೆ. ಎಪ್ಪತ್ತೊಂದರ ಇಳಿ ವಯಸ್ಸಿನಲ್ಲಿಯೂ ಅವರು ಇಪ್ಪತ್ತೊಂದರ ಯುವಕರಂತೆ ಅಷ್ಟೇ ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಅಹರ್ನಿಶಿಯಾಗಿ ಶ್ರಮಿಸಿದ್ದಾರೆ. ಡಾ.ಕೋರೆಯವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಿ ಈ ಸಮಾಜವನ್ನು ಸಂಸ್ಥೆಯನ್ನು ಮುನ್ನಡೆಸಲೆಂದು ಆಶಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟç ಮತ್ತು ಅಂತರಾಷ್ಟ್ರೀಯಮಟ್ಟದಲ್ಲಿ ಸಾಧನೆಗೈದ 80 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು, 64 ಬೆಳ್ಳಿ ಪದಕಗಳನ್ನು ಹಾಗೂ 8 ಪಾರಿತೋಷಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಏಳು ಜನ ಸಿಬ್ಬಂದಿವರ್ಗದವರನ್ನು ಸತ್ಕರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕರ‍್ಯಾಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಿ ಮಾತನಾಡಿ, ಏಳು ಜನ ಶಿಕ್ಷಕರು ಅದ್ಭುತವಾದ ಕನಸುಕಂಡರು, ಅದನ್ನು ಸಾಕಾರಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದರು. ಅವರ ತ್ಯಾಗ ಚಿರಸ್ಮರಣೀಯ ಎಂದರು.

ಕೆಎಲ್‌ಇ ಸಂಗೀತ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ.ಮಹೇಶ ಗುರನಗೌಡರ, ಡಾ.ನೇಹಾ ದಡೇದ ಮತ್ತು ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾದೇವ ಬಳಿಗಾರ ಅವರು ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button