ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿಡಿ ಪ್ರಿಯರು. 6-7 ವರ್ಷಗಳಲ್ಲಿ ಹಲವು ಬಾರಿ ಸಿಡಿ ಬಿಡುಗಡೆ ಮಾಡಿದ್ದಾರೆ. ಆದರೆ ಯಾವುದನ್ನೂ ತುದಿ ಮುಟ್ಟಿಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೂ ಮಂಗಳೂರು ಘಟನೆಗೂ ಏನು ಸಂಬಂಧ? ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿ.ಡಿ ಕಟ್ ಆ್ಯಂಡ್ ಪೇಸ್ಟ್. ಈ ಸಿಡಿ ಜೆಎನ್ಯುಯಿಂದ ಬಂತಾ? ಪಶ್ಚಿಮ ಬಂಗಾಳದಿಂದ ಬಂತಾ? ಕೇರಳದಿಂದ ಬಂತಾ? ಕುಮಾರಸ್ವಾಮಿಗೆ ಸಿಡಿ ಕೊಟ್ಟಿದ್ದು ಯಾರು? ಅನ್ನೋದನ್ನು ಮೊದಲು ಬಹಿರಂಗ ಮಾಡಲಿ ಎಂದರು.
ಮಂಗಳೂರು ಗಲಭೆಯಲ್ಲಿ 85 ಪೊಲೀಸರು ಗಾಯಗೊಂಡಿದ್ದಾರೆ. ದೊಡ್ಡ ಅನಾಹುತವಾಗುವುದನ್ನು ಪೊಲೀಸರು ತಪ್ಪಿಸಿದ್ದಾರೆ. ಆ ಬಗ್ಗೆ ಒಂದು ಮಾತನಾಡಿಲ್ಲ. ಗಾಯಗೊಂಡ ಪೊಲೀಸ್ ಕುಟುಂಬಗಳು ನಿಮ್ಮ ಕಣ್ಣಿಗೆ ಕಾಣಿಸಲಿಲ್ಲಾ. ನಿಜ ಹೇಳಬೇಕೆಂದರೆ ಮಂಗಳೂರಿನ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ಯಾರ ಓಲೈಕೆಗೆ ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಹೇಳಬೇಕು ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ಎರಡು ಸಲ ಸಿಎಂ ಆಗಿದ್ದಾರೆ ಹಾಗಾಗಿ ತಿಳಿದು ಮಾತನಾಡಬೇಕು. ಅನಗತ್ಯವಾಗಿ ಪೊಲೀಸರ ಮೇಲೆ ಗೂಬೆ ಕೂರಿಸಬಾರದು. ಇವರ ಸರ್ಕಾರ ಬಂದಾಗ ಪೊಲೀಸರು ಒಳ್ಳೆಯವರು, ಬೇರೆ ಸರ್ಕಾರ ಬಂದಾಗ ಪೊಲೀಸರು ಕೆಟ್ಟವರು ಎಂಬ ರೀತಿ ಮಾತನಾಡುತ್ತಿದ್ದಾರೆ. ಚುನಾವಣೆ ಬಂದಾಗ ಸಿ.ಡಿ ಬಿಡುಗಡೆ ರಾಜಕಾರಣ ಮಾಡಿ. ಆದರೆ ನೀವು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎಂದರು.
ಯಾವ ಮುಸುಕುಧಾರಿಗಳು ಕಾಶ್ಮೀರದಲ್ಲಿ ಪತ್ತೆಯಾಗಿದ್ರು. ಅವರು ಮಂಗಳೂರಲ್ಲಿ ಪತ್ತೆಯಾಗಿದ್ದಾರೆ. ಕಾಶ್ಮೀರದಲ್ಲಿ ಹೇಗೆ ಘೋಷಣೆ ಕೂಗ್ತಾರೋ ಅದೇ ರೀತಿ ಜೆಎನ್ಯುನಲ್ಲಿ ಘೋಷಣೆ ಕೂಗ್ತಾರೆ. ಇದೀಗ ಜೆಎನ್ಯು ಹಾಗೆಯೇ ಮೈಸೂರು ವಿಶ್ವವಿದ್ಯಾಲಯ ಆಗ್ತಿದೆ ಎಂದು ಗುಡುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ