ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿವಿಧ ಗುಂಪುಗಳ ನಡುವೆ ದ್ವೇಷದ ವಾತಾವರಣಕ್ಕೆ ಉತ್ತೇಜನ ನೀಡುವ ಟ್ವೀಟ್ ಹಾಗೂ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದಾರೆ ಎಂಬ ಕಾರಣಕ್ಕೆ ಕೇರಳದಲ್ಲಿರುವ ಹಿಂದೂಗಳಿಗೆ ಆಲ್ಲಿನ ಸರ್ಕಾರ ನೀರು ನೀಡುತ್ತಿಲ್ಲ. ಈ ಮೂಲಕ ಕೇರಳ ಮತ್ತೊಂದು ಕಾಶ್ಮೀರವಾಗಲು ಹೊರಟಿದೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಚೋದನಾಕಾರಿ ಟ್ವಿಟ್ ಹಿನ್ನಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಎಎಗೆ ಬೆಂಬಲ ನೀಡಿದರು ಎಂಬ ಕಾರಣಕ್ಕೆ ಹಿಂದೂಗಳಿಗೆ ಕೇರಳ ಸರ್ಕಾರ ನೀರು ನಿಲ್ಲಿಸಿರುವುದು ಸರಿಯಲ್ಲ. ಸೇವಾ ಭಾರತಿ ವತಿಯಿಂದ ಅಲ್ಲಿನ ಹಿಂದೂಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದೇವರನಾಡಿನಲ್ಲಿ ಈ ರೀತಿಯ ಭೇದಭಾವ ಎಷ್ಟರ ಮಟ್ಟಿಗೆ ಸರಿ? ಎಂದು ಟ್ವಿಟ್ಟರ್ನಲ್ಲಿ ಆರೋಪಿಸಿದ್ದರು.
ಕರಂದ್ಲಾಜೆ ಟ್ವೀಟ್ ಬಗ್ಗೆ ಸುಪ್ರೀಂ ಕೋರ್ಟ್ ವಕೀಲ ಮತ್ತು ಮಲಪ್ಪುರಂ ನಿವಾಸಿ ಸುಭಾಷ್ ಚಂದ್ರನ್ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಕೇರಳ ಪೊಲೀಸರು ಐಪಿಸಿ ಸೆಕ್ಷನ್ 153 (ಎ) (ಧರ್ಮ, ವರ್ಣದ ಹೆಸರಿನಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆಯನ್ನು ಉತ್ತೇಜಿಸುವುದು) ಅಡಿಯಲ್ಲಿ ಸಂಸದೆ ಶೋಭಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ