ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ ಡಾ.ಎಂ.ಎಸ್.ಸ್ವಾಮಿನಾಥನ್ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಚೆನ್ನೈನಲ್ಲಿ ಸ್ವಾಮಿನಾಥನ್ ಇಂದು ನಿಧನರಾಗಿದ್ದಾರೆ. ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ವಾಮಿನಾಥನ್, ಭಾರತದ ಹಸಿರು ಕ್ರಾಂತಿ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದರು.
1925ರ ಆ.7ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು. ಹವಾಮಾನ ತಜ್ಞ, ಕೃಷಿ ವಿಜ್ಞಾನಿ ಸಸ್ಯ ತಳಿ ವಿಜ್ಞಾನಿಯೂ ಆಗಿದ್ದ ಎಂ.ಎಸ್.ಸ್ವಾಮಿನಾಥನ್, ಭಾರತ ಕೃಷಿ ಉತ್ಪನ್ನಗಳ ಅಭಿವೃದ್ಧಿ ಮೂಲಕ ದೇಶದ ಆರ್ಥಿಕತೆ ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವಸಂಸ್ಥೆ ಸ್ವಾಮಿನಾಥನ್ ಅವರನ್ನು ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ ಎಂದು ಬಣ್ಣಿಸಿದೆ.
1971ರಲ್ಲ್ಲಿ ರೇಮನ್ ಮ್ಯಾಗ್ಸೆಸೆ, 1986ರಲ್ಲಿ ಆಲ್ಬರ್ಟ್ ಐನ್ ಸ್ಟೀನ್ ವಿಶ್ವ ವಿಜ್ಞಾನ ಪ್ರಶಸ್ತಿ, 1987ರಲ್ಲಿ ಜಾಗತಿಕ ಆಹಾರ ಬಹುಮಾನ, ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ