*ಸಕ್ಕರೆ ತಂತ್ರಜ್ಞಾನದಲ್ಲಿ ಎಂಎಸ್ಸಿ ಕೋರ್ಸ್ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಆರಂಭ: ಸಚಿವ ಶಿವಾನಂದ ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಕ್ಕರೆ ತಂತ್ರಜ್ಞಾನದಲ್ಲಿ ಎಂ.ಎಸ್ಸಿ., ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಸಮೀಪದ ಬೆನಕನಹಳ್ಳಿಯಲ್ಲಿ ಸಕ್ಕರೆ, ಮದ್ಯಸಾರ ಸಂಶೋಧನಾ ಕೇಂದ್ರ ಆರಂಭಿಸಲು ಹಾಗೂ ಆಸಕ್ತರಿಗೆ ಸಕ್ಕರೆ ಮತ್ತು ತಂತ್ರಜ್ಞಾನದಲ್ಲಿ ಪಿ.ಎಚ್‌ಡಿಗೆ ಅವಕಾಶ ಕಲ್ಪಿಸಲು ಆಡಳಿತ ಮಂಡಳಿ ನಿರ್ಣಯ ಮಾಡಿದೆ. ಕಾಲೇಜು ಆರಂಭಿಸಲು ಸುಮಾರು 15 ಕೋಟಿ ರೂ. ಅಗತ್ಯವಿದ್ದು, ತಕ್ಷಣಕ್ಕೆ ಐದು ಕೋಟಿ ರೂ. ತೆಗೆದಿರಿಸಲು ನಿರ್ಧರಿಸಲಾಯಿತು. ಹಾಗೂ ಕಾಲೇಜನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಬ್ಬಿನ ಬೆಳೆಗೆ ಬೆಂಕಿ ಬಿದ್ದು ನಷ್ಟ ಸಂಭವಿಸಿದಾಗ ಸಂಸ್ಥೆಯಿಂದ ಪರಿಹಾರ ನೀಡಲು ಕಾರ್ಪಸ್ ಫಂಡ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಉದ್ದಿಮೆಗೆ ಸಂಬಂಧಿಸಿದಂತೆ ಸಂಕಷ್ಟ (ಅಗ್ನಿ ಅವಘಡ) ಎದುರಾದಲ್ಲಿ ತಕ್ಕಮಟ್ಟಿಗೆ ಪರಿಹಾರ ನೀಡುವ ಉದ್ದೇಶವಿದ್ದು, ಮಾರ್ಗಸೂಚಿ ರೂಪಿಸಲಾಗುವುದು ಎಂದು ವಿವರಿಸಿದ್ದಾರೆ.
ಅಂಗಾಂಶ ಕೃಷಿ ಪ್ರಯೋಗಾಲಯ ಒಂಭತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 16.47 ಲಕ್ಷ ಸಸಿಗಳನ್ನು ಉತ್ಪಾದಿಸಲಾಗಿದೆ. ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆನಾಶಕ ಉತ್ಪಾದಕ ಘಟಕ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 2023-24ರ ಅಂತ್ಯಕ್ಕೆ ೮.೨೬ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ.
ಈಗ ರೈತ ರು ಬೆಳೆಯುತ್ತಿರುವ ಕೆಲವು ತಳಿಯ ಇಳುವರಿ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಉತ್ತಮ ಇಳುವರಿಯ ತಳಿಯನ್ನು ರೈತರಿಗೆ ವಿತರಣೆ ಮಾಡಬೇಕಿದ್ದು, ಈ ಉದ್ದೇಶಕ್ಕೆ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿ ಅವರ ಸಲಹೆ ಪಡೆದು ಯಾವ ತಳಿಯನ್ನು ಬೆಳೆಯಬೇಕು ಹಾಗೂ ಹೆಚ್ಚುವರಿ ಇಳುವರಿ ಕೊಡುವ ಕಬ್ಬನ್ನು ಎಸ್. ನಿಜಲಿಂಗಪ್ಪ ಸಂಸ್ಥೆಯಿಂದ ಅಭಿವೃದ್ಧಿ ಪಡಿಸಬೇಕು ಎಂದು ನಿರ್ಧರಿಸಲಾಯಿತು. ಅಂಗಾಂಶ ಕೃಷಿ ಪ್ರಯೋಗಾಲಯ ಹಾಗೂ ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆನಾಶಕ ಉತ್ಪಾದನಾ ಘಟಕವನ್ನು ಮತ್ತಷ್ಟು ಬಲಪಡಿಸಬೇಕು. ಈ ಮೂಲಕ ಕಬ್ಬು ಬೆಳೆಗಾರರಿಗೆ ನೆರವಾಗಬೇಕು ಎಂಬ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ವರ್ಷದಲ್ಲಿ ಕೇವಲ 90 ದಿನ ಮಾತ್ರ ಕಾರ್ಯನಿರ್ವಹಣೆ ಮಾಡಿದರೆ ಲಾಭದಲ್ಲಿ ಮುನ್ನಡೆಸಲು ಕಷ್ಟಸಾಧ್ಯ. ಹೀಗಾಗಿ ಕನಿಷ್ಟ 150 ದಿನ ಕಾರ್ಯನಿರ್ವಹಿಸುವಂತಾಗಬೇಕು. ಕಬ್ಬು ನುರಿಸುವ ಅವಧಿ ಮುಗಿದ ನಂತರ ಉಪಉತ್ಪನ್ನಗಳ ತಯಾರಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ ಎಂದರು.
ಕಬ್ಬು ಬೆಳೆಗಾರರಿಗೆ ಸಲಹೆ ಸೂಚನೆ ನೀಡುವ ಉದ್ದೇಶದಿಂದ ದೇಶದ ವಿವಿಧ ಸಂಶೋಧನಾ ಕೇಂದ್ರಗಳ ಪರಿಣಿತರನ್ನು ಎಸ್. ನಿಜಲಿಂಗಪ್ಪ ಸಂಸ್ಥೆಗೆ ಆಹ್ವಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ