ಗೆದ್ದವರಿಗೆ ನೀಡಿದಷ್ಟೇ ಪ್ರಾಮುಖ್ಯತೆ ಸೋತವರಿಗೂ ನೀಡಬೇಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ಆರಂಭವಾಗಿದೆ. ಆದರೆ ಸೋತವರಿಗೆ ಸಚಿವ ಸ್ಥಾನ ಸಾಧ್ಯವಿಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅಲ್ಲದೇ ಗೆದ್ದವರಂತೆ ಸೋತವರಿಗೂ ಪ್ರಾಮುಖ್ಯತೆ ನೀಡಬೇಕು ಎಂದಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಎಂಟಿಬಿ ನಾಗರಾಜ್​​​, ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ನೋಡಿ ತಿಳಿದುಕೊಂಡಿದ್ದೇನೆ. ಕೇಂದ್ರ ನಾಯಕರ ಜೊತೆ ಏನು ಚರ್ಚೆಯಾಗಿದೆ, ಯಾರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸಿಎಂ ಭೇಟಿಗೆ ಇಂದು ಅವಕಾಶ ಕೇಳಿದ್ದೆನೆ. ಸಿಎಂ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದ್ದು, ಬಳಿಕ ಮುಂದಿನ ನಿರ್ಧಾರ ಮಾಡುತ್ತೆನೆ ಎಂದರು.

11 ಮಂದಿ ಅರ್ಹ ಶಾಸಕರು ಮತ್ತು ಮೂಲ 3 ಬಿಜೆಪಿಗರನ್ನು ಮಂತ್ರಿ ಮಾಡುತ್ತಾರೆ ಎಂಬ ಸುದ್ದಿ ಕೇಳಿದ್ದೇನೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ. ಪಿ ಯೋಗಿಶ್ವರ್ ಮಂತ್ರಿಯಾಗಲಿದ್ಧಾರೆ ಎಂಬ ಮಾತಿದೆ. ಅಷ್ಟು ಬಿಟ್ಟು ಬೇರೆನೂ ನಿಖರ ಮಾಹಿತಿ ಇಲ್ಲ. ದೆಹಲಿಯಿಂದ ಬಂದ ಬಳಿಕ ಸಿಎಂ ಜೊತೆ ಯಾವುದೇ ಭೇಟಿ ಮಾತುಕತೆ ನಡೆಸಿಲ್ಲ ಎಂದು ಹೇಳಿದರು ಎಂಟಿಬಿ ನಾಗರಾಜ್​​.

ರಾಜೀನಾಮೆ ಪರ್ವ ಪ್ರಾರಂಭ ಮಾಡಿದ್ದೆ, ರಮೇಶ್ ಜಾರಕಿಹೋಳಿ ಮತ್ತು ನಾವು. ರಾಜೀನಾಮೆ ನೀಡಿದ 17 ಮಂದಿಗೂ ಅಧಿಕಾರ ನೀಡಬೇಕು. 17 ಮಂದಿ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆ ಮತ್ತು ಯಡಿಯೂರಪ್ಪ ಸಿಎಂ ಆಗಿದ್ದಾರೆ. ಮಂತ್ರಿ ಸ್ಥಾನ ನೀಡಲು ಸೋಲು ಗೆಲುವು ಮಾನದಂಡವಲ್ಲ. ಗೆದ್ದವರಿಗೆ ನೀಡಿದಷ್ಟೆ ಪ್ರಾಮುಖ್ಯತೆ ಸೋತವರಿಗೂ ನೀಡಬೇಕು. ಬಚ್ಚೇಗೌಡ ತನ್ನ ಮಗನನ್ನು ಕಣಕ್ಕಿಳಿಸದಿದ್ದರೆ ನಾನು ಸೋಲುತ್ತಿರಲಿಲ್ಲ ಎಂದರು ಎಂಟಿಬಿ ನಾಗರಾಜ್​​.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button