Kannada NewsKarnataka NewsLatestPolitics

ಸಿದ್ದರಾಮಯ್ಯಗೆ ಮುಡಾ ಸಂಕಷ್ಟ; ಡಿ ನೋಟಿಫೈ ಆಗಿದ್ದಕ್ಕೂ ಪರಿಹಾರ ಪಡೆದ್ರಾ ಸಿಎಂ ಪತ್ನಿ? : ನಾಳೆ ಸಿಎಂ ಮನೆಗೆ ಬಿಜೆಪಿ ಮುತ್ತಿಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ 4 ಸಾವಿರ ಕೋಟಿ ರೂ. ಮೌಲ್ಯದ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ.

ಡಿ ನೋಟಿಫೈ ಆಗಿರುವ ಜಮೀನಿಗೂ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಸಿದ್ದರಾಮಯ್ಯ ಪರಿಹಾರ ಪಡೆದಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಜೊತೆಗೆ ಬೆಲೆ ಇಲ್ಲದ ಜಮೀನು ಕೊಟ್ಟು ಭಾರೀ ಬೆಲೆ ಇರುವ ಪ್ರದೇಶದಲ್ಲಿ ಸೈಟ್ ಪಡೆದಿರುವ ಆರೋಪ ಕೂಡ ಅವರ ಮೇಲಿದೆ. ಹಗರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗಾಗಲೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ತನಿಖೆಗೆ ಆದೇಶಿಸಲಾಗಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣದ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದೆ.

 *ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣ* ಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ನಾಳೆ ಬುಧವಾರ ಬೆಳಗ್ಗೆ *ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್* ನೇತೃತ್ವದಲ್ಲಿ *ಸಿಎಂ ನಿವಾಸಕ್ಕೆ ಮುತ್ತಿಗೆ* ಹಾಕಲಾಗುವುದು ಎಂದು ಬಿಜೆಪಿ ತಿಳಿಸಿದೆ.

ಬೆಳಗ್ಗೆ 10.30 ಗಂಟೆಗೆ ಕುಮಾರಕೃಪಾ ಅತಿಥಿ ಗೃಹದಿಂದ ಸಿಎಂ ನಿವಾಸಕ್ಕೆ ಮೆರವಣಿಗೆ ನಡೆಸುವ ಬಿಜೆಪಿ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.

 *ಇಷ್ಟು ದೊಡ್ಡ ಹಗರಣ ನಡೆದರೂ ಹಣಕಾಸು ಇಲಾಖೆ ಗಮನಕ್ಕೆ ಬಂದಿಲ್ಲವೇಕೆ? ಲೂಟಿಯಾದ ದಲಿತರ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಜೇಬಿನಿಂದ ಕೊಡುತ್ತಾರಾ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.

ತೀವ್ರ ಹೋರಾಟ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ, ನೈತಿಕತೆಯ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದಲ್ಲಿ ಬಿಜೆಪಿಯಿಂದ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಸಣ್ಣ ನೆಪ ಮಾತ್ರ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಪಾತ್ರವಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯ ಗಮನಕ್ಕೆ ಬಾರದೆ 187 ಕೋಟಿ ರೂ. ಮೊತ್ತದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಲೋಕಸಭಾ ಚುನಾವಣೆಗಾಗಿ *ರಾಹುಲ್‌ ಗಾಂಧಿ ಬಳಗಕ್ಕೆ ಈ ಹಣ* ತಲುಪಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನ ದುರದೃಷ್ಟವೆಂಬಂತೆ ಪ್ರಾಮಾಣಿಕ ಅಧಿಕಾರಿಯ ಆತ್ಮಹತ್ಯೆಯಿಂದಾಗಿ ಹಗರಣ ಹೊರಬಂದಿದೆ. ಈಗ ಇದನ್ನು ಮುಚ್ಚಿಹಾಕಲು ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆರ್‌.ಅಶೋಕ ಆರೋಪಿಸಿದ್ದಾರೆ. 

ದಲಿತರ ಚಾಂಪಿಯನ್‌ ಎಂದು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಈ ಹಗರಣ ಮಾಡಿಯೇ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ನೋಡಿದ್ದರು. ಹೈಕಮಾಂಡ್‌ಗೆ *ಕಪ್ಪ ಸಲ್ಲಿಸದೇ ಇದ್ದಲ್ಲಿ* ಸಿಎಂ ಸ್ಥಾನ ಕಳೆದುಕೊಂಡು ಅದನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಬೇಕಾಗಿತ್ತು. ಅದನ್ನು ತಪ್ಪಿಸಲು ದಲಿತರ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಸಚಿವ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಪಡೆದು ತಮ್ಮ ತಲೆಯನ್ನು ಉಳಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ. 

*ದಲಿತರ ಹಣ ಯಾರು ಕೊಡುತ್ತಾರೆ?*

ದಲಿತರಿಗೆ ಸೇರಿದ ಒಟ್ಟು 187 ಕೋಟಿ ರೂಪಾಯಿಯನ್ನು ಬೇನಾಮಿ ಐಟಿ ಕಂಪನಿಗಳ ಖಾತೆಗೆ ವರ್ಗಾಯಿಸಲಾಗಿದೆ. ಈವರೆಗೆ ಆರೋಪಿಗಳಿಂದ 14 ಕೋಟಿ ರೂ, ಬ್ಯಾಂಕ್‌ ಖಾತೆಗಳಿಂದ 10 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಉಳಿದ ಹಣವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಜೇಬಿನಿಂದ ಕೊಡುತ್ತಾರಾ ಅಥವಾ ಕೆಪಿಸಿಸಿ ಬ್ಯಾಂಕ್‌ ಖಾತೆಯಿಂದ ಪಡೆಯಲಾಗುವುದೇ ಎಂಬ ಬಗ್ಗೆ ಮಾಹಿತಿ ಇಲ್ಲ. ನಷ್ಟವಾದ ಈ ಹಣ ದಲಿತರಿಗೆ ಸೇರಿದ್ದು, ಇದನ್ನು ವಾಪಸ್‌ ಪಡೆಯಲು ಏನು ಮಾಡುತ್ತಾರೆ ಎಂದು ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕಿದೆ ಎಂದು ಆರ್‌.ಅಶೋಕ ಒತ್ತಾಯಿಸಿದ್ದಾರೆ. 

ಬಾಕಿ ಹಣ ಎಲ್ಲಿ ಹೋಯಿತು? ಅಂದರೆ ಅದನ್ನು ಗುಳುಂ ಮಾಡಲಾಗಿದೆಯೇ? ನಿಗಮದ ಹಣ ಪಕ್ಕದ ತೆಲಂಗಾಣ ರಾಜ್ಯದ ಚಿನ್ನಾಭರಣ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ನೂರಾರು ಖಾತೆಗಳಿಗೆ ವರ್ಗಾವಣೆ ಆಗಿದೆ. ಅದು ಸಹ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದಿದೆ. ಅಂತರರಾಜ್ಯ ವಹಿವಾಟು ಆಗಿರುವ ಇಷ್ಟೊಂದು ದೊಡ್ಡ ಬಹುಕೋಟಿ ಹಗರಣವನ್ನು *ಸಿಬಿಐಗೆ ಕೊಡಲು ಹಿಂದೇಟು* ಯಾಕೆ? ಈ ಹಗರಣಕ್ಕೂ ತೆಲಂಗಾಣ ಚುನಾವಣೆಗೂ ಇರುವ ನಂಟು ಹೊರಬರಬಹುದು ಎಂಬ ಭಯವೇ? ಎಂದು ಅವರು ಮುಖ್ಯಮಂತ್ರಿಯವರನ್ನು ಪ್ರಶ್ನೆ ಮಾಡಿದ್ದಾರೆ. 

ವಿಶೇಷ ತನಿಖಾ ದಳ ಯಾರು ಯಾರನ್ನೋ ವಿಚಾರಣೆ ಮಾಡುತ್ತಿದೆ. ಆದರೆ ಈವರೆಗೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಕೂರಿಸಿ ವಿಚಾರಣೆ ನಡೆಸಿಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಬಳಿ ಪೊಲೀಸರು ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಹಣಕಾಸು ಇಲಾಖೆಯ ಗಮನಕ್ಕೆ ಬಾರದೆ ಇದು ನಡೆದಿಲ್ಲ ಎಂದಾದ ಮೇಲೆ ಸಿದ್ದರಾಮಯ್ಯ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. 

*ಸಿಎಂ ನಿವಾಸಕ್ಕೆ ಮುತ್ತಿಗೆ*

ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಲಿಪಶು ಮಾಡಿ ದೊಡ್ಡ ತಲೆಗಳನ್ನು ರಕ್ಷಿಸಲಾಗುತ್ತಿದೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. *ಜೂನ್ 3 ರಂದು* ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ನಾನು ಕಾರ್ಯಕರ್ತರೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬುಧವಾರ ಬೆಳಗ್ಗೆ 9.30ಕ್ಕೆ ಕುಮಾರಕೃಪಾ ಅತಿಥಿ ಗೃಹದಿಂದ ಮೆರವಣಿಗೆಯಲ್ಲಿ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಆರ್‌.ಅಶೋಕ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button