GIT add 2024-1
Laxmi Tai add
Beereshwara 33

ದೇವರ ದಾಸಿಮಯ್ಯನ ಮುದನೂರು. ಪುರಾತನ ವಚನ ಪುರುಷೋತ್ತಮನ ಗುರುತನ್ನು ಉಳಿಸುವ ಬಗೆ ಎಂತೋ ?

ವಚನ ಸೃಷ್ಟಿಕರ್ತನ ನೆಲದಲ್ಲಿ ಸಂಚರಿಸಿ ಬಂದ ಅನುಭವದ ಮೂಟೆಯನ್ನು ಬಿಚ್ಚಬೇಕೆನಿಸಿತು.

Anvekar 3
Cancer Hospital 2

ಲೇಖನ ಮತ್ತು ಚಿತ್ರಗಳು_ರವಿ ಕರಣಂ.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮುದನೂರು ಗ್ರಾಮಕ್ಕೆ ಆಕಸ್ಮಿಕವಾಗಿ ಭೇಟಿ ಕೊಟ್ಟಿದ್ದಲ್ಲ. ಉದ್ದೇಶಪೂರ್ವಕವಾಗಿಯೇ ಅದನ್ನು ನೋಡಬೇಕೆಂದೇ ದಾಂಡೇಲಿ- ಹಳಿಯಾಳದಿಂದ ನೂರಾರು ಕಿಲೋಮೀಟರ್ ಗಳ ದೂರದಿಂದ ಬಂದು ನೋಡಿ, ಸಂತೋಷದ ಪಟ್ಟಿದ್ದು ಹಾಗೆ ಬೇಸರ ಮಾಡಿಕೊಂಡದ್ದು ಇದೆ. ಎರೆಡರ ಸಮ್ಮಿಲನದ ತಾಣ ಇದಾಗಿದೆ.

ಬಸವಣ್ಣನ ಕಾಲಕ್ಕಿಂತಲೂ ಮುಂಚಿತವಾಗಿ ಇಲ್ಲಿ ನೆಲೆಸಿದ್ದ ದೇವರ (ಜೇಡರ) ದಾಸಿಮಯ್ಯ, ಅಂದರೆ ಹತ್ತು-ಹನ್ನೊಂದನೇ ಶತಮಾನದ ನಡುವೆ ಜೀವಿಸಿದ್ದ. ಕಾಲದ ಬಗೆಗೆ ನಿಖರ ಮಾಹಿತಿ ದೊರಕದು. ದಾಸಿಮಯ್ಯನವರು ಯಾದಗಿರಿಯ ಹುಣಸಗಿ ತಾಲೂಕಿನ ಮುದನೂರು ಗ್ರಾಮದಲ್ಲಿ, ರಾಮಯ್ಯ-ಶಂಕರಿ ದಂಪತಿಗಳಲ್ಲಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ/ದೇವಾಂಗ ಕುಟುಂಬದಲ್ಲಿ ಜನಿಸಿದ ಎಂಬ ಮಾಹಿತಿಯಿದೆ. ಪತ್ನಿ ಶಿವಪುರದ ದುಗ್ಗಳೆ ಎಂದೂ, ಮಗಳು ಸುವರ್ಚಲೆ ಎಂದು ತಿಳಿದು ಬಂದಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೇ ಪ್ರಪ್ರಥಮವಾಗಿ ವಚನವನ್ನು ಅತ್ಯಂತ ಸರಳ ಕನ್ನಡದಲ್ಲಿ, ಆಡುನುಡಿಗಳಲ್ಲಿ ಬರೆದನೆಂದು ಹೇಳಲಾಗುತ್ತದೆ. ಆತನ ವಚನಗಳು “ರಾಮನಾಥ” ಎಂಬ ಅಂಕಿತದೊಂದಿಗೆ ಇಂದಿಗೂ ಕೂಡ ಪ್ರಸ್ತುತವಾಗಿದ್ದು, ಸಮಾಜದ ಅಂಕು-ಡೊಂಕುಗಳನ್ನು, ಓರೆ-ಕೋರೆಗಳನ್ನು ಮತ್ತು ವೈಯುಕ್ತಿಕ ಜೀವನದ ಅಥವಾ ಬದುಕಿನ ರಹ ದಾರಿಯನ್ನು ತೋರಿಸುತ್ತವೆ. ಭಕ್ತಿಯ ಪರಾಕಾಷ್ಟೆಯು ಮಹತ್ತರವಾಗಿದೆ.

ದೇವರ ದಾಸಿಮಯ್ಯ ಶಿವನನ್ನು ಕುರಿತು ತಪಸ್ಸು ಮಾಡಿದನೆಂದೂ, ಶಿವ ಪ್ರತ್ಯಕ್ಷನಾಗಿ, ಸನ್ಯಾಸಿ ಜೀವನಕ್ಕಿಂತಲೂ ಮಾನವ ಕಲ್ಯಾಣಕ್ಕಾಗಿ ಬದುಕುವಂತೆ ಸೂಚಿದನೆಂಬ ಕಾಲ್ಪನಿಕ ಕಥೆಯಿದೆ. ಮಾನವನ ಅವಶ್ಯಕತೆಗಳಲ್ಲಿ ಮುಖ್ಯವಾದದು ವಸ್ತ್ರ ತಯಾರಿಕೆ. ಹಾಗೆಂದೇ ಬಟ್ಟೆ ನೇಯ್ಗೆಯಲ್ಲಿ ತೊಡಗಿ, ಆ ಕುಲದ ಅಂದರೆ ದೇವ ಬ್ರಾಹ್ಮಣ (ನೇಕಾರ) ಕುಲದ, ದೇವಲ ಮಹರ್ಷಿಯಾದನೆಂದೂ ನಂಬಲಾಗಿದೆ. ಅದರ ಹಿಂದಿನ ಸತ್ಯಾಸತ್ಯತೆಯ ಚರ್ಚೆಗಿಂತ, ಆತನು ಬಾಳಿ ಬದುಕಿದ ರೀತಿಗೆ ಆದ್ಯತೆ ಕೊಡಬೇಕು. ಅಗಾಧ ವ್ಯಕ್ತಿತ್ವದ, ಸರಳ ಬದುಕಿನ, ಉದಾತ್ತ ಚಿಂತನೆಯ, ಸಮಕಾಲೀನ ಜಗತ್ತಿಗೆ ನೀಡಿದ ಕೊಡುಗೆ ಸಾಧಾರಣವೇನಲ್ಲ. ಅಮೋಘ ! ಚಿರಸ್ಮರಣೀಯವಾದುದು.

ಆನೆ ನಡೆದದ್ದೇ ದಾರಿ ಎಂಬಂತೆ, ಆತನ ವಚನಗಳು, ಮುಂದೆ ಬಂದ ವಚನಕಾರರಿಗೆ ರಹದಾರಿ ತೋರಿಸಿದವೆಂದರೆ ಉತ್ಪ್ರೇಕ್ಷೆಯಾಗಲಾರದು. ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ, ಚೆನ್ನ ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ,ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಇನ್ನೂ ಅನೇಕಾನೇಕರು ವಚನ ರಚನೆಯ ಹಾದಿಯಲ್ಲಿ ಸಾಗಿದರು. ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯ ಉನ್ನತ ಶಿಖರಕ್ಕೇರಿತು. ಅಷ್ಟರ ಮಟ್ಟಿಗೆ ದಾಸಿಮಯ್ಯನ ಪ್ರಕಾರ ಪ್ರಚಾರಕ್ಕೆ ಬಂದಿತ್ತು.

ಆತನ ಜನ್ಮ ಸ್ಥಳವಾದ ಮುದನೂರು (ಹಿಂದೆ ಸುರಪುರ ತಾಲೂಕು ಕೇಂದ್ರ ಅದನ್ನು ಇತ್ತೀಚೆಗೆ ಹುಣಸಗಿ ಗೆ ವರ್ಗಾವಣೆ ಮಾಡಲಾಗಿದೆ) ಗ್ರಾಮಕ್ಕೆ ತಾಳಿಕೋಟೆಯಿಂದ ಕೆಂಭಾವಿ ರಸ್ತೆ ಹಿಡಿದು, ಗುತ್ತಿ ಬಸವೇಶ್ವರ ತಿರುವಲ್ಲಿ, ಬಲಕ್ಕೆ ಹೊರಳಿ ಸಾಗಿದರೆ, ತೀರಾ ಯಾತನಾಮಯವೆನಿಸುವ ಬಂಡಿ ದಾರಿಯನ್ನು ಹಿಡಿದದ್ದು ತಪ್ಪಾಯಿತೆನಿಸಿತು. ಈ ಹಿಂದೆ ರಸ್ತೆಯನ್ನು ಮಾಡಿಸಿದ್ದರಂತೆ ! ಅದು ಕಳಪೆ ಕಾಮಗಾರಿಯ ಫಲವಾಗಿ ಮೂರಾಬಟ್ಟೆಯಾಗಿದೆ. ಈ ನಾಲ್ಕು ಕಿ ಮೀ ಕಲ್ಲು ಹಾದಿಯಲ್ಲಿ ಸಾಗಬೇಕಾಯಿತು. ಇಲ್ಲಿಯ ಸ್ಥಳೀಯ ಸರ್ಕಾರಗಳು, ಜನ ಪ್ರತಿನಿಧಿಗಳು ಸಾರ್ವಜನಿಕ ಬದುಕಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಡೆಗಣಿಸಿದ್ದರ ಗುರುತುಗಳು ನಿಮಗೂ ಕಾಣ ಬರುತ್ತವೆ.

ಮುದನೂರು ಗ್ರಾಮಕ್ಕೆ ಹೋಗುವಾಗ ಸುತ್ತಲೂ ಬಯಲು ಬಯಲು ಕಾಣಿಸುತ್ತದೆ. ನಡುನಡುವೆ ಕಲ್ಲಿನ ಪದರುಗಳು ಎದ್ದು ಮೇಲಕ್ಕೆ ಚಾಚಿಕೊಂಡಿರುವುದನ್ನು ಗಮನಿಸುತ್ತೇವೆ. ಹಲವು ರೀತಿಯ ವಿಶಿಷ್ಟ ಕಲ್ಲುಗಳ ರಚನೆ ಇಲ್ಲಿ ಆಗಿದೆ. ಹುಣಸಗಿ, ಕೊಡೇಕಲ್ ಸುತ್ತ ಮುತ್ತಲ ಪ್ರದೇಶಗಳು, ಶಿಲಾಯುಗದ ಅಂತಿಮ ಘಟ್ಟದ ಸ್ಪರ್ಶ ಪಡೆದಿವೆ. ಆದಿ ಮಾನವನೊಂದಿಗೆ ತಳುಕು ಹಾಕಿಕೊಂಡ ನೆಲವಿದು. ಅದೊಂದು ರೋಚಕ ಸಂಗತಿಯೇ. ಅಂತಹ ನೆಲದಲ್ಲಿ ತಿರುಗಾಡಿದ್ದು ಅನುಭವದ ಬತ್ತಳಿಕೆಯಲ್ಲಿ ಶೇಖರಣೆಗೊಂಡ ವಿಷಯಗಳು ಸಾಮಾನ್ಯವಾದವುಗಳಲ್ಲ.

ಮುದನೂರು ಗ್ರಾಮದೊಳಕ್ಕೆ ಹೋಗುವಾಗ ನಾರಾಯಣಪುರ ಜಲಾಶಯದಿಂದ ಕೃಷಿಗೆ ನೀರೊದಗಿಸುವ ಮಹಾ ಕಾಲುವೆಯೊಂದು ಸಿಗುತ್ತದೆ. ಒಳ ಪ್ರವೇಶಿಸುತ್ತಿದ್ದಂತೆಯೇ, ಪ್ರಾಚೀನ ಕಾಲದ ಬದುಕಿನ ರೀತಿಯ ದೃಶ್ಯ ಕಾಣುತ್ತದೆ. ಸ್ವಚ್ಛತೆಯ ಅರಿವಿಲ್ಲ. ಸ್ಮಾರಕಗಳ ಮಹತ್ವ ಗೊತ್ತಿಲ್ಲ. ಮಹತ್ತರ ವಿಷಯ ತಿಳಿಸುವ ಶಾಸನವೊಂದು ಮೂರು ಹೋಳಾಗಿ ಒಡೆದಿದೆ. ಶಿಲಾ ಬಾಲಿಕೆಯರ ವಿಗ್ರಹಗಳು ಒಡೆದು ಹೋಗಿವೆ. ಪ್ರಾಂಗಣದ ಪಟ್ಟಿಕೆಗಳನ್ನು ಒಂದು ಕಟ್ಟೆಯ ಮೇಲೆ ಜೋಡಿಸಿಡಲಾಗಿದೆ. ರಾಮನಾಥ ಅಂದರೆ ಶಿವನ ಮೂರ್ತಿಯು ಇದ್ದು, ಅದು ಮೂಲವೆಂದು ಭಾವಿಸಲಾಗಿದೆ. ರಾಮನಾಥ ದೇಗುಲದ ಮುಂದೆ ಒಂದು ಸಣ್ಣ ದೇಗುಲವಿದ್ದು, ಮೂರ್ತಿಯಿಲ್ಲದೇ ಖಾಲಿಯಿದೆ. ಅದರ ಪಕ್ಕದಲ್ಲಿ ಶಾಸನವೊಂದು ನಿಂತಿದೆ. ಅದಕ್ಕೆ ರಕ್ಷಾ ಕವಚವಿಲ್ಲ. ರಾಮನಾಥ ಮಂದಿರದೊಳಗೆ ಎದುರಿನ ದೇಗುಲದ ಗೋಡೆಯಲ್ಲೊಂದಿದೆ. ಇವು ಮೂಲಾಧಾರಗಳು. ಇವುಗಳ ಸಂರಕ್ಷಣೆ ಅತ್ಯಗತ್ಯವಾಗಿದೆ.

ಊರಲ್ಲಿ ಒಂದುನೂರಾ ಒಂದು ಶಿವಲಿಂಗಗಳು, ಬಾವಿಗಳು ಇದ್ದವೆಂದೂ, ಕಾಲ ಸರಿದಂತೆಲ್ಲ ಕೆಲವು ಕಣ್ಮರೆಯಾಗಿವೆ ಎಂಬ ಮಾತನ್ನು ಊರವರು ಹೇಳುತ್ತಾರೆ. ಎರೆಡು ತೀರ್ಥಗಳು ಕಾಣಿಸುತ್ತವೆ. ರಾಮನಾಥ ದೇಗುಲದ ಹಿಂದೆ, ಒಂದು ಹುಡೇವು ಇದೆ. ಅದನ್ನು ಮೇಲಕ್ಕೆ ಹತ್ತಿ ಹೋಗಲು ಎರೆಡು ಕಿರು ದಾರಿಗಳಿವೆ. ಹೀಗೇ ನೂರಾರು ಪ್ರಾಚೀನ ಕಾಲದ ಗುರುತುಗಳೊಂದಿಗೆ “ಮುದನೂರು” ಹೆಮ್ಮೆಯಿಂದ ನಿಂತಿದೆ. ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ರಾಮನಾಥ ದೇಗುಲದ ಎದುರಲ್ಲಿ ಎರೆಡು ಕಲ್ಯಾಣಿಗಳಿದ್ದು, ಅದರಲ್ಲಿ ನೀರೂ, ಕಸದ ರಾಶಿಯೂ ತುಂಬಿಕೊಂಡಿದೆ. ದೇಗುಲದ ಅಳಿದುಳಿದ ಅವಶೇಷಗಳ ಮೇಲೆ, ಬಟ್ಟೆಗಳನ್ನು ಒಣಗಿಸಲು ಹಾಕುತ್ತಾರೆ. ಪುಂಡರು ನಿಧಿ ಇರುವ ವದಂತಿಗಳನ್ನು ನಂಬಿ ಮೂರ್ತಿಗಳನ್ನು ಒಡೆದು, ದೇಗುಲದ ಭಾಗಗಳನ್ನು ಅಗೆದು ಹಾಳುಗೆಡವಿದ್ದಾರೆಂದು ಗ್ರಾಮದ ಜನರು ವಿಷಾದ ವ್ಯಕ್ತಪಡಿಸುತ್ತಾರೆ.
ಒಬ್ಬ ಕಾವಲುಗಾರನನ್ನಿಡುವ ಯೋಚನೆಯಿಲ್ಲ. ಇದರಿಂದ ಹಣದ ಲಾಭ-ನಷ್ಟ ನೋಡದೇ, ಭಾಷೆ, ಸಾಹಿತ್ಯ, ಸಂಸ್ಕೃತಿ, ಪ್ರಾಚೀನ ಬದುಕಿನ ಗುರುತುಗಳನ್ನು, ಅದರಲ್ಲೂ ಒಬ್ಬ ಆದ್ಯ ವಚನಕಾರನನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿಯಾದರೂ ಇದ್ದುದನ್ನು ಕಾಯ್ದುಕೊಳ್ಳಬೇಕು. ಅಂತಹ ಘನಕಾರ್ಯವನ್ನು ಯಾರೂ ಮಾಡಲು ಸಿದ್ದರಿಲ್ಲ. ದೇಣಿಗೆ ನೀಡಿ, ಭಾವಚಿತ್ರ ಹಾಕಿಸಿಕೊಂಡ ಶಾಸಕರು, ಅದಕ್ಕೆ ಸುರಕ್ಷತೆ ಒದಗಿಸಲು ಮುಂದಾಗಬೇಕು. ಹಿಂದೆ ಎಂ ಎಂ ಕಲಬುರ್ಗಿ,,ಕನ್ನಡ ವಿ ವಿ ಪ್ರೊಫೆಸರ್ ಗಳು, ಹಿಂದಿನ ಸರ್ಕಾರದಲ್ಲಿ ಸಚಿವೆಯಾಗಿದ್ದ ಉಮಾಶ್ರೀ, ಮತ್ತೆ ಹಲವರೆಲ್ಲ ಭೇಟಿ ಕೊಟ್ಟು ಹೋಗಿದ್ದಾರೆಂದು ಗ್ರಾಮದವರು ತಿಳಿಸಿದರು. ಪ್ರಯೋಜನವೇನು ? ಪ್ರಾಚ್ಯ ವಸ್ತು ಇಲಾಖೆಯ ಒಂದು ಫಲಕವಿದೆ. ಆದರೆ ಕಾಳಜಿಯಿಲ್ಲ.ಕಾಟಾಚಾರದ ನಿರ್ವಹಣೆ ಆಗಬಾರದು ಅಲ್ಲವೇ ?.

ಅಭಿವೃದ್ಧಿ ಕಾಣದ ಬಯಲುಸೀಮೆ. ಉತ್ತಮ ರಸ್ತೆಗಳಿಲ್ಲ. ಶಿಕ್ಷಣದಲ್ಲಿ ಗುಣಮಟ್ಟವಿಲ್ಲ. ಮನೆಗಳಲ್ಲಿ ಶೌಚಾಲಯಗಳಿಲ್ಲ. ಅನಕ್ಷರತೆ, ನಿರುದ್ಯೋಗ, ಕಿತ್ತು ತಿನ್ನುವ ಬಡತನ ಒಂದೇ ಎರೆಡೇ ? ಇಲ್ಲಿ ಎಲ್ಲ ಜನಪ್ರತಿನಿಧಿಗಳು, ಮಂತ್ರಿಗಳು ಎಲ್ಲರೂ ಬಂದು ಹೋಗುತ್ತಾರೆ. ಹೀಗೇ ದಾನ ಮಾಡಿ ಹೋಗಿ ಬಿಟ್ಟರೆ, ಅದರ ಉದ್ದಾರವಾದೀತೇನು ? ಅಲ್ಲಿರುವಂತಹ ಪ್ರತಿಯೊಂದು ವಸ್ತುಗಳನ್ನು ಕಾಯ್ದುಕೊಳ್ಳುವುದು ಊರಿನವರ ಜವಾಬ್ದಾರಿ. ಪ್ರಾಚ್ಯ ವಸ್ತು ಇಲಾಖೆಯ ಜವಾಬ್ದಾರಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಾಳಿತ, ಸ್ಥಳೀಯ ಸರಕಾರಗಳು ಅವರಿವರೆನ್ನದೇ ಎಲ್ಲರೂ ಕೂಡ ಜತನದಿಂದ ಕಾಯ್ದುಕೊಂಡು ಹೋಗಬೇಕು. ವಿದ್ಯಾವಂತರು, ಸುಶಿಕ್ಷಿತರು ಕೊಂಚ ಹೋರಾಟ ಮಾಡಿಯಾದರೂ ಆದಿ ವಚನಕಾರ ದೇವರ ದಾಸಿಮಯ್ಯನ ನೆನಪನ್ನು ಮಾನವ ಕುಲಕೋಟಿ ಉದ್ದಕ್ಕೂ ಸ್ಮರಿಸುವಂತೆ ಮಾಡಬೇಕಿದೆ.

Emergency Service

ದಾಸಿಮಯ್ಯನ ವಚನಗಳು “ರಾಮನಾಥ” ಅಂಕಿತದಲ್ಲಿ 176 ಲಭ್ಯವಿವೆ. ಅವುಗಳಲ್ಲಿ ಕೆಲವನ್ನು ಆಯ್ದು ಕೊಡಲಾಗಿದೆ.

*ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿಯುವಾತ್ಮನು
ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ.

ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥ.

ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥ.

ಅಡಗ ತಿಂಬರು; ಕಣಿಕದ ಅಡಿಗೆಯಿರಲಿಕೆ.
ಕುಡಿವರು ಸುರೆಯ! ಹಾಲಿರಲಿಕೆ.
ಹಡದುಂಬ ವೇಶಿಯನೊಲ್ಲದೆ ಹೆರರ ಮಡದಿಗಳುಪುವ
ಸತ್ತ ನಾಯ ತಿಂಬ ಹಡ್ಡಿಗರನೇನೆಂಬೆನೈ! ರಾಮನಾಥ.

ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು.
ಆಶ್ರಯದ ನಿದ್ರೆ ಕೆಟ್ಟಿತ್ತು.
ಗ್ರಾಸ ಮೆಲ್ಲನಾಯಿತ್ತು.
ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು.
ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ!ರಾಮನಾಥ.*

ಯಾವುದೇ ವರ್ಗಾವಣೆ /ನಿಯೋಜನೆ ಪ್ರಸ್ತಾವನೆ ಸಲ್ಲಿಸಬೇಡಿ – ಸಿಎಂ ಸೂಚನೆ

https://pragati.taskdun.com/do-not-submit-any-transfer-assignment-proposal-cm/

*ದಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ಶೃಂಗಸಭೆ*

https://pragati.taskdun.com/the-art-of-living-bhav-the-expressions-summit-2023-summit/

ರೋಚಕ ಫೈನಲ್ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಇಂಡಿಯನ್ ನೇವಿ: ಮಹಿಳಾ ವಿಭಾಗದಲ್ಲಿ ಸೌತ್ ಸೆಂಟ್ರಲ್ ರೇಲ್ವೆ  ಹೈದರಾಬಾದ್ ಚಾಂಪಿಯನ್

https://pragati.taskdun.com/in-thrilling-final-indian-navy-in-mens-category-south-central-railway-hyderabad-in-womens-category-champions/

Bottom Add3
Bottom Ad 2