*ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಮಾಡಿದ್ದಾರೆ; ಕೋಣ ಬಲಿಕೊಟ್ಟಿದ್ದಾರೆ: ಶಾಕಿಂಗ್ ಹೇಳಿಕೆ ನೀಡಿದ ಶಾಸಕ*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಜನತೆಯ ಕುಂದು ಕೊರತೆ, ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಇಂದು ನಡೆಸಿದ್ದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ ಭಾರಿ ಹೈಡ್ರಾಮ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದರು, ಪ್ರತಿಭಟನೆ, ಏಕಾಂಗಿ ಧರಣಿ ನಡೆಸಿದ್ದರು. ಈ ಎಲ್ಲಾ ಘಟನೆ ಬಳಿಕ ಇದೀಗ ಮುನಿರತ್ನ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಮಾಡಿದ್ದಾರೆ. ಮಂತ್ರವಾದಿಗಳು ಡಬ್ಬದಲ್ಲಿ ಹಾಕಿ ವಶೀಕರಣ ಮಾಡಿದ್ದಾರೆ. ಇದಕ್ಕಾಗಿ ಕೋಣವನ್ನು ಬಲಿ ಕೊಟ್ಟಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮಂಕಾಗಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇವರು ಮೊದಲಿನ ಸಿದ್ದರಾಮಯ್ಯನವರೇ ಅಲ್ಲ. ಈಗಿರುವುದು ಸಿದ್ದರಾಮಯ್ಯ ವೈಖರಿ ಅಲ್ಲ. ಬೆಂಗಳೂರಿನ ಅವಸ್ಥೆ ನೋಡಿದರೆ ಅವರು ಈ ಹಿಂದೆ ಸುಮ್ಮನಿರುತ್ತಿರಲಿಲ್ಲ. ಈಗ ರಸ್ತೆಯಲ್ಲಿ ಗುಂಡಿ ಬಿದ್ದರೂ ಸುಮ್ಮನಿದ್ದಾರೆ. ಜನ ಸಾಯುತ್ತಿದ್ದರೂ ಗಮನಿಸುತ್ತಿಲ್ಲ, ಸುಮ್ಮನಿದ್ದಾರೆ. ಒಂದು ರೀತಿ ಮಂಕಾಗಿದ್ದಾರೆ. ಇದಕ್ಕೆಲ್ಲ ಕಾರಣ ಏನು? ಮಾಟ, ಮಂತ್ರದ ವಶೀಕರಣವೇ ಕಾರಣ ಎಂದಿದ್ದಾರೆ.
ಇನ್ನು ಕುಮಾರಸ್ವಾಮಿಯವರ ಮೇಲೂ ಮಾಟ ಮಂತ್ರ ಮಾಡಿದ್ದಾರೆ. ಕೋಣ ಬಲಿ ಕೊಡಲಾಗಿದೆ. ಹಾಗಾಗಿ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ವಿರುದ್ಧ ಹೆಸರು ಹೇಳದೆಯೇ ಪರೋಕ್ಷ ಆರೋಪ ಮಾಡಿದ್ದಾರೆ.