ನಮ್ಮ ಕ್ಷೇತ್ರಕ್ಕೆ ಅಭ್ಯರ್ಥಿ ನಿಲ್ಲಿಸಿ ಗೆದ್ದು ತೋರಿಸಲಿ; ಕಾಂಗ್ರೆಸ್ ನಾಯಕರಿಗೆ ಸಚಿವ ಮುನಿರತ್ನ ಸವಾಲು
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್.ಆರ್.ನಗರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವೆಸಗಲಾಗಿದೆ ಎಂದು ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ದೂರು ನೀಡಿದ್ದಾರೆ. ಸಂಸದ ಡಿ.ಕೆ.ಸುರೇಶ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.
ಆರ್.ಆರ್.ನಗರದಲ್ಲಿ ಮತದಾರರ ಪಟ್ಟಿ ಪರೀಷ್ಕರಣೆಯಲ್ಲಿ ಅಕ್ರಮ ನಡೆದಿದೆ ಹಲವು ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಸಂಸದ ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಮುನಿರತ್ನ, ಡಿ.ಕೆ.ಸುರೇಶ್ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣ ಬಿಟ್ಟು ಗೌರವದಿಂದ ನಡೆದುಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಲಿಟ್ ಆಗಿರುವ ಹಾಗೂ ಸೇರ್ಪಡೆಯಾಗಿರುವ ಸೂಕ್ತ ಮಾಹಿತಿ ತನ್ನಿ. ಅಕ್ರಮ ಸಾಬೀತಾದರೆ ರಾಜಕೀಯವನ್ನೇ ಬಿಡುತ್ತೇನೆ. ನಿಮ್ಮ ಜೊತೆ ನಾನು ಇದ್ದಾಗ ಯಾವುದೂ ಸೇರ್ಪಡೆ, ಡಿಲಿಟ್ ಆಗಿಲ್ಲ. ಈಗ ನಿಮ್ಮ ಜೊತೆ ನಾನು ಇಲ್ಲ ಹಾಗಾಗಿ ಆರೋಪ. ನಿಮ್ಮಜೊತೆ ನಾನು ಇದ್ದಾಗ ಪವಿತ್ರವಾಗಿದ್ದೆ. ಈಗ ಅಪವಿತ್ರವಾಗಿದ್ದೇನೆ. ಡಿ.ಕೆ.ಸುರೇಶ್ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಸಂಸದರಾಗಿ ಮೊದಲು ಘನತೆ ತರುವಂತ ಹೇಳಿಕೆ ಕೊಡಲಿ. ಇಷ್ಟಕ್ಕೂ ಅವರು ಆರ್.ಆರ್,ನಗರದಲ್ಲಿ ಮಾಡಿದ್ದಾದರೂ ಏನು? ಕಾಂಗ್ರೆಸ್ ನಾಯಕರಿಗೆ ಸಾಧ್ಯವಾದರೆ ನಮ್ಮ ಕ್ಷೇತ್ರದಲ್ಲ ಅಭ್ಯರ್ಥಿ ನಿಲ್ಲಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಇಬ್ಬರೂ ನಾಮಪತ್ರ ಸಲ್ಲಿಸೋಣ. ಎರಡೂ ಪಕ್ಷದವರು ಜನರ ಮುಂದೆ ಹೋಗೋಣ. ಚುನಾವಣೆಗೆ ನಾನೂ ಮತಯಾಚನೆ ಮಾಡುವುದಿಲ್ಲ, ಕಾಂಗ್ರೆಸ್ ಅಭ್ಯರ್ಥಿಯೂ ಮತಯಾಚನೆ ಮಾಡುವುದೂ ಬೇಡ, ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ ಮಾಡದೇ ಗೆದ್ದು ತೋರಿಸಲಿ ನೋಡೋಣ ಎಂದರು.
ಮುನಿರತ್ನ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ವೇಳೆ ರಾಜಕಾರಣ ಬಿಟ್ಟು ಕೂಲಿ ಮಾಡಿಕೊಂದು ಬದುಕುತ್ತೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆರ್ ಆರ್ ನಗರದಲ್ಲಿ ಮತದಾರರ ಪಟ್ಟಿ ಅಕ್ರಮ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
https://pragati.taskdun.com/rr-nagaravoter-id-scamcongress-complaintd-k-siuresh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ