
ಪ್ರಗತಿವಾಹಿನಿ ಸುದ್ದಿ: ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಪತ್ನಿ ಸುಪಾರಿ ಕೊಟ್ಟು ಗಂಡನನ್ನು ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ರಾಮನಗರದ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆ ಬಳಿಕ ಪತಿ ಲೋಕೇಶ್ ಶವದ ಬಳಿ ವಿಷದ ಬಾಟಲಿ ಇಟ್ಟು ಪತ್ನಿ ಚಂದ್ರಕಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೋಳಾಡಿದ್ದಳು. ಬಳಿಕ ಸುದ್ದಿಗೋಷ್ಠಿ ನಡೆಸಿ ತನಗೆ ಪತಿ ಸಾವಿನ ಬಗ್ಗೆ ಅನುಮಾನವಿದೆ. ಸೂಕ್ತ ತನಿಖೆ ನಡೆಸಬೇಕು ಎಂದಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಗೊತ್ತಾಗಿದೆ. ಪತ್ನಿ ಚಂದ್ರಕಲಾ ಫೋನ್ ಕರೆಗಳ ಬಗ್ಗೆ ಪರಿಶೀಲಿಸಿದಾಗ ಯೋಗೇಶ್ ಎಂಬಾತನ ಜೊತೆ ಆಕೆ ಅನೈತಿಕ ಸಂಬಂಧ ಹೊಂದಿರುವುದು ಹಾಗೂ ಇದೇ ಕಾರಣಕ್ಕೆ ಪತಿಯನ್ನು ಮೂರು ಲಕ್ಷಕ್ಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಸದ್ಯ ಚಂದ್ರಕಲಾಳನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.