ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆಸ್ಪತ್ರೆ ಎಂದ ಕೂಡಲೆ ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದು, ವೈದ್ಯರ ತಂಡ, ದಾದಿಯರ ಗಡಿಬಿಡಿ, ರೋಗಿಗಳು ನರಳಾಟ ಸಾಮಾನ್ಯ. ಆದರೆ ಇದಕ್ಕೆ ಸಂಪೂರ್ಣ ಹೊರತಾಗಿತ್ತು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ. ಎಲ್ಲ ರೋಗಿಗಳು ಮತ್ತು ಅವರ ಜೊತೆಗಾರರು ವಚನ ಗಾಯನ, ಸುಗಮ ಸಂಗೀತ ಮತ್ತು ಕರ್ನಾಟಕ ಸಂಗೀತ ಕೇಳಿ ಪುಳಕಿತಗೊಂಡರು. ಒಂದು ಗಂಟೆಗಳ ಕಾಲ ಎಲ್ಲ ನೋವುಗಳನ್ನು ಮರೆತು ಸಂಗೀತಲೋಕದಲ್ಲಿ ಮೈಮರೆತರು.
ಕೆಎಲ್‌ಇ ವಿಶ್ವವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸಂಗೀತ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಗೀತ ಸುಧೆಯ ಗಾನ ತೇಲಿಬಂತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಂಗೀತಕ್ಕೆ ಮನಸ್ಸಿಗೆ ಮುದ ನೀಡುವುದಲ್ಲದೇ, ಎಲ್ಲ ಚಿಂತೆಗಳನ್ನು ದೂರ ಮಾಡುವ ಶಕ್ತಿ ಇದೆ. ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಮತ್ತು ಅವರ ಜೊತೆಗಾರರಿಗೆ ಚಿಕಿತ್ಸೆ ಮತ್ತು ಅದರ ಕುರಿತು ಚಿಂತೆ ಕಾಡುತ್ತಿರುತ್ತದೆ. ಅವರು ನಿರಾಳವಾಗಿ ಇರಲು ಮತ್ತು ಸಮಾಧಾನದಿಂದ ಇರುವಂತೆ ಸಂಗೀತ ಪ್ರೇರೆಪಿಸುತ್ತದೆ ಎಂದರು.
ಹಾಡು ಆಲಿಸುವುದರಿಂದ ಮನೆ, ಕಚೇರಿಗಳಲ್ಲಿನ ಕೆಲಸದೊತ್ತಡ ನಿವಾರಣೆಗೆ ಸಹಕಾರಿಯಾಗಲಿದೆ. ಕಲಾವಿದರನ್ನು ಗೌರವಿಸಿ ಅವರಿಗೆ ಪ್ರೋತ್ಸಾಹವನ್ನು ನೀಡಬೇಕೆಂದು ಕರೆ ನೀಡಿದರು.
ಸಂಗೀತ ಶಾಲೆಯ ಸುನಿತಾ ಪಾಟೀಲ, ದುರ್ಗಾ ಕಾಮತ ನಾಡಕರ್ಣಿ, ಡಾ. ಸ್ನೇಹಾ ರಾಜೂರಿಕರ ಅವರಿಗೆ ತಬಲಾ ಜೀತೆಂದ್ರ ಸಾಬನ್ನವರ, ಹಾರ‍್ಮೋನಿಯಂ ಯಾದವೇಂದ್ರ ಪೂಜಾರಿ ಅವರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ ವಿ ಜಾಲಿ, ಡಾ. ಆರ್ ಬಿ ನೇರ್ಲಿ, ಡಾ. ರಾಜೇಂದ್ರ ಭಾಂಡನಕರ, ಡಾ. ಬಸವರಾಜ ಬಿಜ್ಜರಗಿ, ಶಿರಗಾವಿ, ಅನಿಲ ಇಂಗಳೆ ಮುಂತಾದವರು ಉಪಸ್ಥಿತರಿದ್ದರು. ರಾಜೇಶ್ವರಿ ಹಂಪನಾಯಕ ಸ್ವಾಗತಿಸಿದರು. ಕ್ರಿಸ್ಟಿನಾ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ