ನನ್ನ ನೇಮಕಾತಿಗೂ ತಂದೆಯ ರಾಜಕೀಯಕ್ಕೂ ಸಂಬಂಧ ಇಲ್ಲ: ಧ್ರುವ ಪಾಟೀಲ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ: ‘ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯನಾಗಿ ನನ್ನನ್ನು ನೇಮಿಸಿರುವುದಕ್ಕೂ ನಮ್ಮ ತಂದೆಯವರ (ಎಂ ಬಿ ಪಾಟೀಲ) ರಾಜಕಾರಣಕ್ಕೂ ಸಂಬಂಧವಿಲ್ಲ. ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ನಾನು ಹನ್ನೊಂದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದನ್ನು ಗುರುತಿಸಿ ನನ್ನನ್ನು ಈಗ ಸದಸ್ಯನಾಗಿ ನೇಮಿಸಲಾಗಿದೆ’ ಎಂದು ಧ್ರುವ ಪಾಟೀಲ ಹೇಳಿದ್ದಾರೆ.
ಇಲ್ಲಿನ ಮಮದಾಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಜತೆ ಸೇರಿ ತಮ್ಮ ನೇತೃತ್ವದ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆ್ಯಂಡ್ ಅನಿಮಲ್ಸ್ (ಎಸ್ ಪಿಪಿಎ) ಮೂಲಕ ಕೈಗೊಂಡಿರುವ ಕೋಟಿ ವೃಕ್ಷ ಆಂದೋಲನದ ಭಾಗವಾಗಿ ಎರಡು ವರ್ಷಗಳ ಹಿಂದೆ ನೆಟ್ಟಿದ್ದ 1.36 ಲಕ್ಷ ಸಸಿಗಳ ಬೆಳವಣಿಗೆ ವೀಕ್ಷಿಸಿದ ನಂತರ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಸಸಿಗಳು ಈಗ ಮರಗಳಾಗಿ ನಳನಳಿಸುತ್ತಿದ್ದು ಇದನ್ನು ನೋಡಿ ಅವರು ಹರ್ಷ ವ್ಯಕ್ತಪಡಿಸಿದರು.
‘ರಾಜ್ಯ ವನ್ಯಜೀವಿ ಮಂಡಲಿಗೆ ನಾನು ಸಚಿವರ ಪುತ್ರ ಎಂಬ ಕಾರಣಕ್ಕೆ ಸದಸ್ಯನಾಗಿ ನೇಮಿಸಲಾಗಿದೆ ಎನ್ನುವ ಆರೋಪ ಸರಿಯಲ್ಲ. ನಾನು ಅಮೆರಿಕದಲ್ಲಿ ಓದುತ್ತಿದ್ದರೂ ನಾಲ್ಕು ತಿಂಗಳ ರಜೆಯಲ್ಲಿ ಇಲ್ಲಿಗೆ ಬರುತ್ತೇನೆ. ಆ ದಿನಗಳಲ್ಲಿ ಮೂರು ತಿಂಗಳನ್ನು ನಾನು ಕಬಿನಿ, ಬಂಡೀಪುರ, ದಾಂಡೇಲಿ ಅರಣ್ಯ ಪ್ರದೇಶಗಳಲ್ಲೇ ಕಳೆಯುತ್ತೇನೆ’ ಎಂದು ಅವರು ಹೇಳಿದರು.
‘ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಕುರಿತು ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಜತೆಗೆ ಕಪ್ಪು ಚಿರತೆ ಹಾಗೂ ಹುಲಿ ಛಾಯಾಗ್ರಹಣ ಮಾಡಿದ್ದೇನೆ. ಅಲ್ಲದೆ, ವಿಜಯಪುರದ ವನ್ಯಜೀವಿ ಸಂಪತ್ತನ್ನು ಕುರಿತು ವೈಲ್ಡ್ ವಿಜಯಪುರ ಎನ್ನುವ ಸಾಕ್ಷ್ಯಚಿತ್ರ ಮಾಡಿದ್ದೇನೆ. ಅದನ್ನು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ಕೂಡ ವೀಕ್ಷಿಸಿ, ಮೆಚ್ಚಿಕೊಂಡಿದ್ದರು’ ಎಂದು ಅವರು ವಿವರಿಸಿದ್ದಾರೆ.
‘ಎಂಟು ವರ್ಷದ ಹುಡುಗನಾಗಿದ್ದ ದಿನಗಳಿಂದಲೂ ನಾನು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಈಗ ವನ್ಯಜೀವಿ ಮಂಡಳಿಯ ಸದಸ್ಯನಾಗಿರುವುದು ಒಂದು ಅಧಿಕೃತ ಸ್ಥಾನಮಾನವಷ್ಟೆ. ಈ ಮೂಲಕ ವನ್ಯಜೀವಿ ಸಂರಕ್ಷಣೆಗೆ ರೂಪಿಸುವ ನೀತಿ ನಿರೂಪಣೆಗಳ ಮೇಲೆ ಸಕಾರಾತ್ಮಕ ಕೊಡುಗೆ ನೀಡಬಹುದು ಎನ್ನುವುದು ನನ್ನ ಭಾವನೆಯಾಗಿದೆ’ ಎಂದು ಧ್ರುವ ನುಡಿದರು.
‘ಮಂಡಳಿಗೆ ಈಗ ಸಾಕಷ್ಟು ವಿಜ್ಞಾನಿಗಳು, ಪರಿಸರ ತಜ್ಞರನ್ನು ನೇಮಿಸಲಾಗಿದೆ. ನಾನು ಯುವಜನಾಂಗದ ಪ್ರತಿನಿಧಿಯಾಗಿ ಅಲ್ಲಿ ಕೆಲಸ ಮಾಡಲಿದ್ದೇನೆ. ನನ್ನ ನೇಮಕಾತಿ ತಂದೆಯ ರಾಜಕಾರಣದೊಂದಿಗೆ ತಳುಕು ಹಾಕುವುದು ಬೇಡ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ