
ಪ್ರಗತಿವಾಹಿನಿ ಸುದ್ದಿ: ಇಂದು ಗಣೇಶ ಚತುರ್ಥಿ ಸಂಭ್ರಮ ನಾಡಿನಾದ್ಯಂತ ಮನೆಮಾಡಿದೆ. ಅಂಬಾವಿಲಾಸ ಅರಮನೆ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ದಸರಾ ಗಜಪಡೆಗೆ ವಿಶೇಷ ಪೂಜೆ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ 14 ಆನೆಗಳಿಗೆ ಅರಣ್ಯಾಧಿಕಾರಿಗಳು ಪೂಜೆ ಸಲ್ಲಿಸಲಿದ್ದಾರೆ.
ವಿಘ್ನ ನಿವಾರಕ ಗಣೇಶನ ಪ್ರತಿರೂಪವೆಂದು ದಸರಾ ಗಜಪಡೆಗೆ ಪೂಜೆ ಸಲ್ಲಿಸಲಾಗುತ್ತಿದ್ದು, ಅರ್ಚಕ ಪ್ರಹ್ಲಾದ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಪ್ರತೀ ವರ್ಷ ಈ ಪದ್ಧತಿ ನಡೆದುಕೊಂಡು ಬಂದಿದೆ. ಇನ್ನು ದೇಶದಾದ್ಯಂತ ಹಬ್ಬ ಭರ್ಜರಿ ನಡೆಯುತ್ತಿದ್ದು, ರಾಜಧಾನಿ ಬೆಂಗಳೂರಿನ ಬಸಲಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯದಲ್ಲಿ ಬೆಳಗ್ಗಿನಿಂದ ಪೂಜೆ ನಡೆಯುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಸರತಿ ಸಾಲಿನಲ್ಲಿ ನಿಂತು ಗಣೇಶನ ದರ್ಶನ ಪಡೆಯುತ್ತಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಅಂಬಾರಿ ಹೊರುವ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ ಭೀಮ, ಧನಂಜಯ, ಗೋಪಿ, ವರಲಕ್ಷ್ಮಿ ಲಕ್ಷ್ಮಿ ಕಂಜನ್, ರೋಹಿತ್ ಹಾಗೂ ಏಕಲವ್ಯ ಆನೆಗಳು ಅರಮನೆಯಲ್ಲಿ ಬೀಡುಬಿಟ್ಟಿದೆ.