*ಖಾಸಗಿ ಶಾಲೆಯಲ್ಲಿ 13 ವರ್ಷದ ಬಾಲಕನಿಗೆ ಮೂವರಿಂದ ಚಿತ್ರಹಿಂಸೆ: ಮರ್ಮಾಂಗಕ್ಕೆ ಒದ್ದು ಹಲ್ಲೆ*

ಪ್ರಗತಿವಾಹಿನಿ ಸುದ್ದಿ: 13 ವರ್ಷದ ವಿದ್ಯಾರ್ಥಿ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿ ರ್ಯಾಗಿಂಗ್ ಮಾಡಿರುವ ಘಟನೆ ಮೈಸೂರಿನ ಖಾಸಗಿ ಶಾಲೆಯಲ್ಲಿ ನಡೆದಿದೆ.
ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಬಾಲಕನಿಗೆ ಪ್ರತಿ ದಿನ ಹಣ ಕೊಡುವಂತೆ ಮೂವರು ಒತ್ತಾಯಿಸುತ್ತಿದ್ದರು. ಹಣ ಕೊಡದಿದ್ದರೆ ಹಲ್ಲೆ ನಡೆಸುತ್ತಿದ್ದರು. ನೀನು ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೆ ಕೇಳಬೇಕು ಇಲ್ಲವಾದಲ್ಲೆ ಹೊಡೆಯುವುದಾಗಿ ಬೆದರಿಸುತ್ತಿದ್ದರು. ವಿದ್ಯಾರ್ಥಿಗಳ ಗ್ಯಾಂಗ್ ಹಿಂಸೆ ಬಗ್ಗೆ ಬಾಲಕ ಶಿಕ್ಷಕರಿಗೆ ದೂರು ನೀಡಿದರೆ ಶಿಕ್ಷಕರು ಅವರು ಕೆಟ್ಟವರು ಅವರ ಬಳಿ ಮಾತನಾಡಬೇಡ ಎಂದು ಹೇಳಿ ಸುಮ್ಮನಾಗಿದ್ದಾರೆ. ಬಾಲಕ ಸುಮ್ಮನಿದ್ದರೂ ಮೂವರ ರ್ಯಾಗಿಂಗ್ ಮಾತ್ರ ನಿಂತಿರಲಿಲ್ಲ.
ಇದೀಗ ಮೂವರು ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಹಣ ಕಿತ್ತುಕೊಂಡು ಬಾಲಕನ ಮರ್ಮಾಂಗಕ್ಕೆ ಒದ್ದು ಚಿತ್ರಹಿಂಸೆ ನೀಡಿದ್ದಾರೆ. ಶಾಲೆಯ ವಾಶ್ ರೂಂ ಬಳಿಯೇ ಬಾಲಕನ ಮೇಲೆ ರ್ಯಾಗಿಂಗ್ ನಡೆದಿದೆ. ಇಷ್ಟಾಗ್ಯೂ ಶಾಲಾ ಆಡಳಿತ ಮಂಡಳಿ ಮೂವರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಗನನ್ನು ಈ ಸ್ಥಿತಿಗೆ ತಂದ ಮೂವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.



