Latest

ಕೊವಿಡ್ ಟೆಸ್ಟ್ ವೇಳೆ ಜಿಲ್ಲಾಧಿಕಾರಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೊರೊನಾ ಟೆಸ್ಟ್ ವೇಳೆ ಸೋಂಕಿತ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಂಬರ್ ನೀಡದೇ ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ನೀಡಿ ಆಟವಾಡಿಸಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೆಬ್ಬಾಳ ಬಡಾವಣೆಯ ನಿವಾಸಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಕೊವಿಡ್ ಟೆಸ್ಟ್ ಗೆ ಒಳಗಾಗಿದ್ದಾನೆ. ಈ ವೇಳೆ ತನ್ನ ಮೊಬೈಲ್ ಸಂಖ್ಯೆ ನೀಡದೇ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ನೀಡಿ ಬಂದಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಪಾಸಿಟೀವ್ ಇರುವುದು ದೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ವ್ಯಕ್ತಿ ನೀಡಿದ ನಂಬರ್ ಗೆ ಮೈಸೂರು ಜಿಲ್ಲಾಡಳಿತದ ಕೊರೊನಾ ಕಂಟ್ರೋಲ್ ರೂಂನಿಂದ ಕರೆ ಮಾಡಿದ್ದಾರೆ. ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಬೇಕು ಎಲ್ಲಿದ್ದೀರಾ ಎಂದುಕೇಳಿದ್ದಾರೆ. ಈ ಮಾತುಗಳನ್ನು ಕೇಳಿದ ಜಿಲ್ಲಾಧಿಕಾರಿ ಅಭಿರಾಮ್ ಒಮ್ಮೆ ಗಾಬರಿಯಾಗಿದ್ದಾರೆ.

ವಿಷಯ ತಿಳಿದ ಬಳಿಕ ಕೊವಿಡ್ ಸೋಂಕಿತ ಮಾಡಿದ ಕಿತಾಪತಿಯಿಂದ ಇಷ್ಟೇಲ್ಲ ಎಡವಟ್ಟಾಗಿರುವುದು ಗೊತ್ತಾಗಿದೆ. ಸದ್ಯ ತಪ್ಪು ನಂಬರ್ ಕೊಟ್ಟು ಕೊರೊನಾ ಸೋಂಕಿತ ಎಸ್ಕೇಪ್ ಆಗಿದ್ದಾನೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ, ಕೊವಿಡ್ ಟೆಸ್ಟ್ ಗೆ ಒಳಗಾಗುವವರು ಈ ರೀತಿ ತಪ್ಪು ನಂಬರ್ ಕೊಟ್ಟು ತಪ್ಪಿಸಿಕೊಳ್ಳುವುದರಿಂದ ವೈರಸ್ ನಿಂದ ತಪ್ಪಿಸಿಕೊಳ್ಳಲಾಗದು. ಸಾರ್ವಜನಿಕರು ಕೊರೊನಾ ಕಂಟ್ರೋಲ್ ರೂಂ ಗೆ ಸರಿಯಾಗಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button