ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚಾಮುಂಡಿ ಬೆಟ್ಟದಿಂದ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಅರ್ಚಕರು ಅರಮನೆಗೆ ತಂದಿದ್ದು, ಸರ್ವಾಲಂಕಾರ ಭೂಷಿತಳಾದ ದೇವಿಗೆ ವಿವಿಧ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಮಧ್ಯಾಹ್ನ 2:59ರಿಂದ 3:20ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ 3:40 ರಿಂದ 4:15ರೊಳಗೆ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊರಲಿದೆ. ಅಂಬಾರಿಯಲ್ಲಿ ವಿರಾಜಮಾನವಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಈ ಬಾರಿ ಕೇವಲ 30-40 ನಿಮಿಷಗಳಲ್ಲಿ ಜಂಬೂ ಸವಾರಿ ಮುಕ್ತಾಯಗೊಳ್ಳಲಿದ್ದು, ಕೇವಲ 400 ಮೀಟರ್ ನಷ್ಟು ಮಾತ್ರ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಪ್ರತಿ ವರ್ಷ 5.5 ಕಿ.ಮೀ ಸಾಗುತ್ತಿದ್ದ ಜಂಬೂ ಸವಾರಿ ಮೆರವಣಿಗೆ.
ಇನ್ನು ಈ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ 4 ಕಲಾತಂಡಗಳು, 2 ಸ್ತಬ್ಧ ಚಿತ್ರ, ಅಶ್ವಾರೋಹಿ ದಳದ 2 ತುಕಡಿ, ರಾಜ್ಯ ಪೊಲೀಸ್ ವಾಹನದ ಆನೆಗಾಡಿ ಪಾಲ್ಗೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ