
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡಾ.ರಾಜ್ ಕುಮಾರ್ ಪ್ರತಿಮೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಶಾಸಕ ಎನ್.ಎ.ಹ್ಯಾರಿಸ್, ರಾಜ್ ಪ್ರತಿಮೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪ್ರತಿಮೆ ಇಡುವುದೇ ದೊಡ್ಡ ಕಥೆ. ಅದರಲ್ಲಿ ಆಫೀಸ್ ಬೇರೆ ಮಾಡೋಕ್ ಆಗುತ್ತಾ? ಪ್ರತಿಮೆಗೆ ಕವರ್ ಮಾಡುವ ಅಗತ್ಯವಿಲ್ಲ. ಪ್ರೊಟೆಕ್ಷನ್ ಬೇಕು ಅಂದ್ರೆ ಅವರ ಮನೆಯಲ್ಲಿಯೇ ಪ್ರತಿಮೆ ಇಟ್ಟುಕೊಳ್ಳಲಿ, ರೋಡ್ ನಲ್ಲಿ ಯಾಕೆ ಇಡುತ್ತಾರೆ. ಬುದ್ಧಿ ಇಲ್ಲ ಏನಾದರೂ ಹೇಳಿದರೆ ಅದನ್ನೂ ಬೇರೆ ರೀತಿ ತೆಗೆದುಕೊಳ್ಳುತ್ತಾರೆ ಎಂದು ಹೆಳಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಹ್ಯಾರಿಸ್ ನೀಡಿದ್ದ ಹೇಳಿಕೆ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅಣ್ಣಾವ್ರ ಅಭಿಮಾನಿಗಳು ಹ್ಯಾರಿಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಹೇಳಿಕೆ ಬಿಡಿಗಡೆ ಮಾಡಿರುವ ಶಾಸಕ ಹ್ಯಾರಿಸ್, ನಾನು ಅಂತಹ ಹೇಳಿಕೆ ನೀಡಿಲ್ಲ. ಯಾರೋ ಕಟ್ ಫೇಸ್ಟ್ ಮಾಡಿ ವಿಡಿಯೋ ಎಡಿಟ್ ಮಾಡಿದ್ದಾರೆ. ನಾನು ಅಣ್ಣಾವ್ರ ದೊಡ್ಡ ಅಭಿಮಾನಿ. ಅವರ ಬಗ್ಗೆ ಯಾರಾದರೂ ಮಾತನಾಡಲು ಆಗುತ್ತಾ? ಅವರು ಇಡೀ ಮಾನವ ಕುಲಕ್ಕೆ ಸಂದೇಶ ರವಾನಿಸಿದವರು. ಆದರೂ ನನ್ನ ಮಾತಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ